ಇಂಫಾಲ್: ಮಣಿಪುರದಲ್ಲಿ ಕುಕಿ ಸಮುದಾಯದವರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೆ ತರುವಂತೆ ಆಗ್ರಹಿಸಿ ಕುಕಿ ಸಮುದಾಯದ ಮುಖಂಡರು ಶನಿವಾರ ರ್‍ಯಾಲಿ ನಡೆಸಿದ್ದಾರೆ. ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ತಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನಲಾದ ಆಡಿಯೊ ವಿರುದ್ಧವೂ ಪ್ರತಿಭಟಿಸಿದ್ದಾರೆ.
'ಕುಕಿ ಸಮುದಾಯವರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚಿಸುವಂತೆ ಒತ್ತಾಯಿಸಲು ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು' ಎಂದು ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ನಮ್ಮ ಸಮುದಾಯದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದು, ಪ್ರತಿಭಟನೆಯಲ್ಲಿ ಅದನ್ನೂ ಖಂಡಿಸಲಾಗಿದೆ' ಎಂದು ಮತ್ತೊಬ್ಬ ಪ್ರತಿಭಟನಕಾರರು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಮಣಿಪುರ ಸರ್ಕಾರ, 'ಮುಖ್ಯಮಂತ್ರಿಯವರದ್ದು ಎನ್ನಲಾದ ಆಡಿಯೊ ಅಸಲಿಯಲ್ಲ. ಅದನ್ನು ತಿರುಚಲಾಗಿದೆ. ಮಣಿಪುದಲ್ಲಿ ಶಾಂತಿ ಕದಡುವ ದುರುದ್ದೇಶದಿಂದ ಈ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ' ಎಂದು ತಿಳಿಸಿದೆ.
ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್, ಪ್ರತ್ಯೇಕ ಆಡಳಿತ ಕೋರಿರುವ ಕುಕಿ ಸಮುದಾಯದ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.