ಜೆರುಸಲೇಂ: ಗಾಜಾದಲ್ಲಿ ಹಮಾಸ್ ಬಂಡುಕೋರರು ಒತ್ತೆಯಾಗಿರಿಸಿಕೊಂಡಿದ್ದ ಆರು ಮಂದಿಯ ಮೃತದೇಹಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಭಾನುವಾರ ತಿಳಿಸಿದೆ.
ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ತನ್ನ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಯನ್ನು ಇಸ್ರೇಲ್ ಪಡೆಗಳು ಚುರುಕುಗೊಳಿಸಿವೆ.
ಮೃತರನ್ನು ಅಮೆರಿಕ ಮೂಲದ ಇಸ್ರೇಲ್ ಉದ್ಯಮಿ ಜೋನ್ ಪೋಲಿನ್ ಅವರ ಪುತ್ರ ಹರ್ಷ್ ಗೋಲ್ಡ್‌ಬರ್ಗ್ ಪೋಲಿನ್(23), ಓರಿ ಡ್ಯಾನಿನೊ(25), ಈಡೆನ್ ಯೆರುಶಲ್ಮಿ(24), ಅಲ್ಮೊಗ್ ಸಾರುಸಿ(27), ಅಲೆಕ್ಸಾಂಡರ್ ಲೊಬನೊವ್(33) ಹಾಗೂ ಕಾರ್ಮೆಲ್ ಗ್ಯಾಟ್(40) ಎಂದು ಗುರುತಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್‌ನ ಅಮಾಯಕ ಪ್ರಜೆಗಳನ್ನು ಹತ್ಯೆ ಮಾಡಿರುವ ಹಮಾಸ್‌ಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಗುಡುಗಿದ್ದಾರೆ. ಹಮಾಸ್ ಬಂಡುಕೋರರು ಶಾಂತಿ ಒಪ್ಪಂದ ಬಯಸುತ್ತಿಲ್ಲ ಎನ್ನುವುದನ್ನು ಈ ಕೃತ್ಯದಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಜೋ ಬೈಡೆನ್ ಸಾಂತ್ವನ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಗೋಲ್ಡ್‌ಬರ್ಗ್ ಪೋಲಿನ್ ಪೋಷಕರನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದಾರೆ. ಹಮಾಸ್ ಬಂಡುಕೋರರ ಕೃತ್ಯವನ್ನು ಖಂಡಿಸಿದ್ದು, ತಮ್ಮ ಕೃತ್ಯಗಳಿಗೆ ಹಮಾಸ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಹೆಚ್ಚಿನ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ವೆಸ್ಟ್ ಬ್ಯಾಂಕ್‌ನಲ್ಲಿ ಭಾನುವಾರ ನಡೆದ ಮತ್ತೊಂದು ಘಟನೆಯಲ್ಲಿ ಇಸ್ರೇಲ್ ಪೊಲೀಸ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಹಮಾಸ್ ಬಂಡುಕೋರರು ದಾಳಿ ಮಾಡಿದ್ದು, ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.