ನವದೆಹಲಿ: ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಪ್ರಸಾದ 'ಲಡ್ಡು' ತಯಾರಿಸಲು ನಿಜವಾಗಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆಯೇ ಎಂದು ತಿಳಿಯಲು ಕೂಡಲೇ ಸಿಬಿಐ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈಚೆಗೆ ಆರೋಪಿಸಿದ್ದರು.
ಸಿ.ಎಂ ಹೇಳಿಕೆಯಿಂದ ತಿರುಪತಿ ವೆಂಕಟೇಶ್ವರನ ಆರಾಧಿಸುವ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಸರ್ಕಾರ ಈ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಿ ಅಥವಾ ತನಿಖೆ ಹೊಣೆಯನ್ನು ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ಶರ್ಮಿಳಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಿರುಪತಿ 'ಲಡ್ಡು' ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿ ಆಡಳಿತ ಪಕ್ಷವಾದ ಟಿಡಿಪಿ ಮತ್ತು ಪ್ರತಿಪಕ್ಷಗಳಾದ ವೈಎಸ್‌ಆರ್‌ಸಿಪಿ, ಕಾಂಗ್ರೆಸ್ ನಡುವೆ ವಾಕ್ಸಮರ ಜೋರಾಗಿದೆ.
ಚಂದ್ರಬಾಬು ನಾಯ್ಡು ಅವರ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಅದರ ಸಮರ್ಥನೆಯಾಗಿ ಗುಜರಾತ್‌ನ ಜಾನುವಾರು ಪ್ರಯೋಗಾಲಯ ಎನ್‌ಡಿಡಿಬಿ ಕಾಫ್ ಲಿಮಿಟೆಡ್‌ನ ವರದಿಯನ್ನು ಟಿಡಿಪಿ ಬಿಡುಗಡೆ ಮಾಡಿತ್ತು.
ಲಡ್ಡುವನ್ನು ತಯಾರಿಸಲು ಬಳಸಿದ್ದ ತುಪ್ಪದ ಮಾದರಿಯಲ್ಲಿ ಗೋಮಾಂಸದ ಚರ್ಬಿಯ ಅಂಶವು ಪತ್ತೆಯಾಗಿದೆ ಎಂದು ದೃಢಪಡಿಸುವ ಪ್ರಯೋಗಾಲಯ ವರದಿಯನ್ನು ಟಿಡಿಪಿ ವಕ್ತಾರ ಆನಂ ವೆಂಕಟರಮಣ ರೆಡ್ಡಿ ಬಿಡುಗಡೆ ಮಾಡಿದ್ದರು.
ಈ ವರದಿಯ ಪ್ರಕಾರ, ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಪತ್ತೆಯಾಗಿದೆ. 2024ರ ಜುಲೈ 9ರಂದು ತುಪ್ಪದ ಮಾದರಿಯನ್ನು ಪಡೆಯಲಾಗಿತ್ತು. ಪ್ರಯೋಗಾಲಯದ ವರದಿಯು ಜುಲೈ 16ರಂದು ಬಂದಿದೆ.