ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೂ ಆಗ್ರಹಿಸಿದ್ದಾರೆ. ಈ ಮಧ್ಯೆ ಪವನ್ ಕಲ್ಯಾಣ್ ಅವರ ಹಿಂದಿನ ವಿಡಿಯೋವೊಂದು ವೈರಲ್ ಆಗುತ್ತಿದೆ.
ನಟ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಧರ್ಮದ ಬಗ್ಗೆ ಚರ್ಚಿಸುತ್ತಿರುವ ಹಳೆಯ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ಇತ್ತೀಚೆಗೆ ಹಿಂದೂಗಳ ಅವಹೇಳನ ಬಗ್ಗೆ ಭಾವುಕರಾಗಿ ಮಾತನಾಡಿದ ಪವನ್ ಕಲ್ಯಾಣ್, ಹಿಂದೂ ಆಚರಣೆಗಳ ಬಗ್ಗೆ ಮಾಡಿದ ಹಾಸ್ಯಗಳನ್ನು ಟೀಕಿಸಿದರು. ಆದರೆ ಈಗ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವರ ಹಿಂದಿನ ಹೇಳಿಕೆಗಳು ವೈರಲ್ ಆಗುತ್ತಿವೆ.
ವೈರಲ್ ವಿಡಿಯೋದಲ್ಲಿ, ಪವನ್ ಕಲ್ಯಾಣ್ ತನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತಾರೆ. ನಾನು ಚರ್ಚ್‌ಗಳಿಗೆ ಹೋಗಿದ್ದೇನೆ. ಬ್ಯಾಪ್ಟೈಜ್ ಆಗಿದ್ದೇನೆ ಎಂದು ಬಹಿರಂಗಪಡಿಸಿದ್ದು ಕ್ರಿಶ್ಚಿಯನ್ ಧರ್ಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಪೂರಕವೆಂಬಂತೆ ಯೇಸುವಿನ ಜನ್ಮಸ್ಥಳವಾದ ಬೆಥ್ ಲೆಹೆಮ್ಗೆ ಸ್ವಂತ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಇದು ಅವರ ಇತ್ತೀಚಿನ ಹೇಳಿಕೆಗಳಿಗೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ತಿರುಪತಿ ಲಡ್ಡು ವಿವಾದದ ಬಳಿಕ ಹಿಂದೂ ನಂಬಿಕೆಗಳನ್ನು ಗೌರವಿಸುವಂತೆ ಜನರನ್ನು ಒತ್ತಾಯಿಸಿದರು. ಯೇಸು ಅಥವಾ ಇಸ್ಲಾಂ ಬಗ್ಗೆ ಯಾಕೆ ಅಪಹಾಸ್ಯ ಮಾಡಲ್ಲ ಎಂದು ಪ್ರಶ್ನಿಸಿದರು. ತಿರುಪತಿ ಲಡ್ಡು ವಿಚಾರಕ್ಕೆ ಸಂಬಂಧಿಸಿದಂತೆ ವಿವಾದದ ನಂತರ, ಕಲ್ಯಾಣ್ ಹಿಂದೂ ರಾಷ್ಟ್ರೀಯತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.