ನವದೆಹಲಿ: ಕೆಲಸದ ಒತ್ತಡದಿಂದ ಇವೈ(EY) ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ 7 ರಿಂದ 10 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಹೇಳಿದ್ದಾರೆ.
EY ಉದ್ಯೋಗಿ ಸಾವಿಗೆ ಸಂಬಂಧಿಸಿದ "ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣ"ದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮುಂದಿನ 7 ರಿಂದ 10 ದಿನಗಳಲ್ಲಿ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಂಡವಿಯಾ ಅವರು, ಅನ್ನಾ ಸೆಬಾಸ್ಟಿಯನ್ ಸಾವಿನ ನಂತರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತನಿಖೆ ಪ್ರಾರಂಭಿಸಿದೆ. "ನಾವು ಈಗಾಗಲೇ ರಾಜ್ಯದ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ, ವರದಿಯನ್ನು ಪರಿಶೀಲಿಸಿದ ನಂತರವೇ ಹೆಚ್ಚಿನ ವಿವರಗಳನ್ನು ನೀಡುತ್ತೇವೆ" ಎಂದು ಹೇಳಿದರು.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಅಗತ್ಯ ಬಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಇವೈ ಕಂಪನಿ ಉದ್ಯೋಗಿ, 26 ವರ್ಷದ ಲೆಕ್ಕಪರಿಶೋಧಕಿ ಅನ್ನಾ ಸೆಬಾಸ್ಟಿಯನ್ ಪೆರಾಯಿ ಅವರು ಒತ್ತಡದ ಕಾರಣಕ್ಕೆ ಸಾವಿಗೀಡಾಗಿದ್ದರು. ಈ ಬಗ್ಗೆ ಅವರ ತಾಯಿ ಕಂಪನಿ ಸಿಇಒಗೆ ಪತ್ರ ಬರೆದ ನಂತರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
"ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ನಷ್ಟದಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ನ್ಯಾಯ ಮತ್ತು ಕಾರ್ಮಿಕ ಸಚಿವಾಲಯವು ಅಧಿಕೃತವಾಗಿ ದೂರನ್ನು ಕೈಗೆತ್ತಿಕೊಂಡಿದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.