ಮುಂಬೈ: 'ಮಹಾರಾಷ್ಟ್ರದ ಬದ್ಲಾಪುರದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ ಶಿಂದೆ ಹತ್ಯೆಯನ್ನು ಪೊಲೀಸರು ತಪ್ಪಿಸಬಹುದಿತ್ತು. ಆದರೂ ಆತನ ತಲೆಗೆ ಗುಂಡು ಹೊಡೆದದ್ದು ಏಕೆ?' ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾ.
'ಪೊಲೀಸರ ಕಾರ್ಯಚಟುವಟಿಕೆಗಳನ್ನು ನಾವು ಅನುಮಾನಿಸುತ್ತಿಲ್ಲ. ಆದರೆ ಎಲ್ಲಾ ಆಯಾಮಗಳಿಂದಲೂ ಅವರು ಪ್ರಾಮಾಣಿಕರಾಗಿರಬೇಕಷ್ಟೇ. ಈ ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸರು ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ನಡೆದುಕೊಳ್ಳಬೇಕು' ಎಂದು ಪೀಠ ಹೇಳಿತು.
'ಶೂಟ್ ಔಟ್ ಅನ್ನು ಎನ್‌ಕೌಂಟರ್ ಎಂದು ಕರೆಯಲಾಗದು. ಏಕೆಂದರೆ ಎರಡರ ವ್ಯಾಖ್ಯಾನವೂ ಬೇರೆಯೇ ಆಗಿದೆ. ಹಾಗಿದ್ದರೆ ಠಾಣೆ ಜಿಲ್ಲೆಯ ಮುಂಬೈ ಬೈಪಾಸ್‌ನಲ್ಲಿ ನಡೆದದ್ದು ಏನು? ತಲೆಗೆ ಗುಂಡು ಹೊಡೆಯುವ ಮೊದಲು ಕೈ ಅಥವಾ ಕಾಲಿಗೆ ಹೊಡೆಯಬಹುದಿತ್ತಲ್ಲವೇ?' ಎಂದು ಪೀಠ ಪ್ರಶ್ನಿಸಿತು.
'ಈ ಪ್ರಕರಣದಲ್ಲಿ ಆರೋಪಿ ಶಿಂದೆಯು ಪೊಲೀಸ್ ಅಧಿಕಾರಿಯಿಂದ ಪಿಸ್ತೂಲ್ ಕಸಿದುಕೊಂಡ ಎಂದು ನಂಬುವುದು ಕಷ್ಟ. ಪಿಸ್ತೂಲ್ ಅನ್ನು ಅನ್‌ಲಾಕ್ ಮಾಡಿ, ಗುಂಡು ಹಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಇಲ್ಲವೆಂದಾದಲ್ಲಿ, ಅದಕ್ಕೆ ಸೂಕ್ತ ರೀತಿಯ ಆದೇಶ ಹೊರಡಿಸಬೇಕಾಗುತ್ತದೆ' ಎಂದು ಪೀಠ ಹೇಳಿತು.
ಶಾಲಾ ಆಡಳಿತ ರಕ್ಷಿಸಲು ಸಂಚು ಆರೋಪ
ಶಾಲೆಯ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ ಅಕ್ಷಯ್, ನರ್ಸರಿಯ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಕೃತ್ಯ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಂಧಿತ ಆರೋಪಿ ಅಕ್ಷಯ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಈ ಹತ್ಯೆ ಹಿಂದೆ ಸಂಚು ನಡೆದಿದೆ ಎಂದು ಆರೋಪಿಸಿರುವ ಎಂವಿಎ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದೆ. ಮುಖ್ಯ ಆರೋಪಿಗಳನ್ನು (ಶಾಲಾ ಆಡಳಿತ) ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರಕ್ಷಿಸುತ್ತಿದ್ದಾರೆ. ಹಾಗಾಗಿ ಮುಖ್ಯ ಸಾಕ್ಷಿಯನ್ನು ಹತ್ಯೆಗೈದಿದ್ದಾರೆ ಎಂಬ ಶಂಕೆ ಮೂಡಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.
'ಪೊಲೀಸ್ ವಾಹನದಲ್ಲಿ ಅಕ್ಷಯ್ ಶಿಂದೆಯನ್ನು ಕರೆದೊಯ್ಯುವಾಗ ಆತ ಮೊದಲಿಗೆ ಪೊಲೀಸರ ಮೇಲೆ ಗುಂಡುಹಾರಿಸಲು ಯತ್ನಿಸಿದ ಹಾಗಾಗಿ ಆತನ ಮೇಲೆ ಗುಂಡು ಹಾರಿಸಲಾಯಿತು' ಎಂದು ಪೊಲೀಸರು ಹೇಳಿದ್ದಾರೆ.
'ಆತನ ಮುಖಮುಚ್ಚಿ ಕೈಗಳನ್ನು ಹಿಂದಕ್ಕೆ ಕಟ್ಟಿ ವಾಹನದಲ್ಲಿ ಕರೆದೊಯ್ಯಲಾಗಿದೆ. ಆತ ಹೇಗೆ ಗುಂಡು ಹಾರಿಸಲು ಸಾಧ್ಯ' ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.
'ಪ್ರಕರಣ ನಡೆದ ಬದ್ಲಾಪುರ ಶಾಲೆಯ ಟ್ರಸ್ಟಿಗಳು ಎಲ್ಲಿದ್ದಾರೆ ಎಂದು ತಿಳಿಯಬೇಕಿದೆ ಎಂದು ಹೇಳಿರುವ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ 'ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಸರ್ಕಾರವು ಗ್ಯಾಂಗ್‌ಸ್ಟರ್‌ಗಳ ರೀತಿ ನಡೆಸಿಕೊಂಡಿತು. ಆದರೆ ಶಾಲೆಯ ಟ್ರಸ್ಟಿಗಳನ್ನು ರಕ್ಷಿಸುತ್ತಿದೆ' ಎಂದಿದ್ದಾರೆ.
ಎನ್‌ಕೌಂಟರ್ ಕುರಿತು ಪ್ರತಿಕ್ರಿಯಿಸಿರುವ ಎನ್‌ಎಸ್‌ಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವ್ಹದ್ ಎನ್‌ಕೌಂಟರ್‌ಗೆ ಪೊಲೀಸರು ನೀಡುತ್ತಿರುವ ಕಾರಣ ಆಧಾರರಹಿತವಾಗಿದೆ. ಕೈಗಳಿಗೆ ಬೇಡಿ ಹಾಕಿಸಿಕೊಂಡಿರುವ ವ್ಯಕ್ತಿ ಬಂದೂಕು ಕಸಿದು ಗುಂಡುಹಾರಿಸಲು ಹೇಗೆ ಸಾಧ್ಯ. ಅದುಕೂಡ ಸುತ್ತಲೂ ಐವರು ಪೊಲೀಸರು ಇರುವಾಗ' ಎಂದು ಹೇಳಿದ್ದಾರೆ.
ಎನ್‌ಕೌಂಟರ್ ಬೆನ್ನಲ್ಲೇ ಅಕ್ಷಯ್ ವಿರುದ್ಧ ಕೊಲೆಗೆ ಯತ್ನ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಜೊತೆಗೆ, ಆತನ ಸಾವಿಗೆ ಸಂಬಂಧಿಸಿ 'ಆಕಸ್ಮಿಕ ಸಾವು' ಎಂಬ ಪ್ರಕರಣವನ್ನೂ ದಾಖಲಿಸಲಾಗಿದೆ.