ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಪೋಟದ ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ವ್ಯಗ್ರವಾಗಿದ್ದು, ಪ್ರತಿ ದಾಳಿ ಆರಂಭಿಸಲು ಗುರುವಾರ ಸಿದ್ದತೆ ನಡೆಸಿತ್ತು.
ಇಸ್ರೇಲ್‌ನ ಇಸ್ರೇಲ್ ರಕ್ಷಣಾ ಪಡೆ ಎಕ್ಸ್ ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಎಚ್ಚರಿಸಿದೆ.
ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಬುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ.
ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಬಾರಿ ಉಲ್ಬಣಗೊಂಡಿದ್ದಿದೆ.
ಈ ಬಾರಿಯ ಪರಿಸ್ಥಿತಿ ಭಿನ್ನವಾಗಿದೆ. ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಬುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಶಪಥ ಕೂಡ ಮಾಡಿದೆ.