ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ವಿರೋಧಿ ಸುಳ್ಳು ಸುದ್ದಿಗಳ ಪತ್ತೆಗಾಗಿ ರೂಪಿಸಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ತಿದ್ದುಪಡಿ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ನಿಯಮಗಳನ್ನು ರದ್ದು ಮಾಡಿದ್ದು, ಎಡಿಟರ್ಸ್ ಗಿಲ್ಡ್ ತೀರ್ಪನ್ನು ಸ್ವಾಗತಿಸಿದೆ.

ಐಟಿ ತಿದ್ದುಪಡಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಬಗ್ಗೆ ವಿಭಾಗೀಯ ಪೀಠವು ಜನವರಿಯಲ್ಲಿ ಭಿನ್ನ ತೀರ್ಪು ಪ್ರಕಟಿಸಿತ್ತು. ನಂತರ ಅರ್ಜಿ ವಿಚಾರಣೆಯ ಹೊಣೆ ನ್ಯಾಯಮೂರ್ತಿ ಎ.ಎಸ್.ಚಂದುರಕರ್ ಅವರ ಹೆಗಲಿಗೇರಿತ್ತು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದುರಕರ್ ಅವರು, ಈ ನಿಯಮಗಳು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು), 19ನೇ ವಿಧಿ (ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಮತ್ತು 19(1)ನೇ ವಿಧಿಯನ್ನು (ವೃತ್ತಿಯ ಹಕ್ಕು ಮತ್ತು ಸ್ವಾತಂತ್ರ್ಯದ) ಉಲ್ಲಂಘಿಸುತ್ತವೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಹಾಗೂ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ತಿದ್ದುಪಡಿ ಕಾಯ್ದೆ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಹಾದಿ ತಪ್ಪಿಸುವ ಸುದ್ದಿಗಳ ಪತ್ತೆಗೆ ಸತ್ಯಾಸತ್ಯತೆ ಪರಿಶೀಲಿಸುವ ಘಟಕವನ್ನು ಸ್ಥಾಪಿಸುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇದೆ ಎಂದು ಹೇಳಲಾಗಿತ್ತು.
ಇದನ್ನು ಪ್ರಶ್ನಿಸಿದ್ದ ಎಡಿಟರ್ಸ್ ಗಿಲ್ಡ್, ಬಾಂಬೆ ಹೈಕೋರ್ಟ್‌ನಲ್ಲಿ ಕಳೆದ ಜೂನ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿತ್ತು. ಜತೆಗೆ ಈ ನೂತನ ಕಾಯ್ದೆಯು ದೇಶದಲ್ಲಿರುವ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಕಳವಳವನ್ನೂ ವ್ಯಕ್ತಪಡಿಸಿತ್ತು.