ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ ಎಂದು ಪ್ರತಿಪಾದಿಸಿದ್ದಾರೆ.
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ ಎಂದು ಪ್ರತಿಪಾದಿಸಿದ್ದಾರೆ.
'ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷಗಳು ಪ್ರಯತ್ನಿಸುತ್ತಿವೆ' ಎಂದು ಬಿಜೆಪಿಯ 'ವಿಜಯ ಸಂಕಲ್ಪ' ಯಾತ್ರೆಯಲ್ಲಿ ಅವರು ಆರೋಪಿಸಿದ್ದಾರೆ.
'ಮುಂಬರುವ ಚುನಾವಣೆ ಐತಿಹಾಸಿಕವಾಗಿರಲಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಜನರು ಒಂದೇ ತ್ರಿವರ್ಣ ಧ್ವಜದ ಅಡಿಯಲ್ಲಿ ಮತ ಚಲಾಯಿಸಲಿದ್ದಾರೆ. ಡಾ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಚುನಾವಣೆ ನಡೆಯಲಿದೆ' ಎಂದು ಅವರು ಹೇಳಿದರು.
'ದೇಶದಲ್ಲಿ ಇಬ್ಬರು ಪ್ರಧಾನಿಗಳು ಇರಲು ಸಾಧ್ಯವಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರು ಪ್ರಧಾನಿ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ ಜಮ್ಮುವಿನಲ್ಲಿ ಎರಡು ಧ್ವಜಗಳು ಇರಲು ಸಾಧ್ಯವಿಲ್ಲ' ಎಂದು ಅವರು ಉಲ್ಲೇಖಿಸಿದರು.
'ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯ ಬಗ್ಗೆ ಯಾವುದೇ ಶಕ್ತಿಗಳು ಮಾತನಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಹಾಗೂ ಅಬ್ದುಲ್ಲಾ ಅವರು ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ನಾನು ರಾಹುಲ್ ಹಾಗೂ ಅಬ್ದುಲ್ಲಾ ಅವರನ್ನು ಕೇಳಲು ಬಯಸುತ್ತೇನೆ. ನಿಮ್ಮಿಂದ ರಾಜ್ಯ ಸ್ಥಾನಮಾನ ಮರಳಿಸಲು ಹೇಗೆ ಸಾಧ್ಯ? ನೀವು ಕಾಶ್ಮೀರದ ಜನರನ್ನು ಏಕೆ ಮೂರ್ಖರನ್ನಾಗಿ ಮಾಡುತ್ತಿದ್ದೀರಿ?' ಎಂದು ಕೇಳಿದ್ದಾರೆ.
ಚುನಾವಣೆಯ ನಂತರ ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ನಾನು ವಾಗ್ದಾನ ನೀಡಿದ್ದೇನೆ. ಇದು ಯಾವುದೇ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಲ್ಲ. ಸಂಸತ್ತಿನಲ್ಲಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.