ಪಾಟನಾ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಸಿದ್ಧರಾಗಿದ್ದಾರೆ. ಪಕ್ಷದ ಹೆಸರು, ನಾಯಕತ್ವ ಮತ್ತಿತರ ವಿವರಗಳನ್ನು ಅಕ್ಟೋಬರ್ 2ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
'ಜನ್ ಸೂರಜ್' ಹೆಸರಿನಲ್ಲಿ 2022ರ ಅಕ್ಟೋಬರ್ 2ಕ್ಕೆ ಆರಂಭಿಸಿದ ಪಯಣ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ(ಸೆ.29) ಪಾಟನಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಮುಖಂಡರು ಸಿದ್ಧರಿರಬೇಕು ಎಂದು ಸಲಹೆ ನೀಡಿದರು.
ನಾನು ಹೊಸ ಪಕ್ಷದ ನಾಯಕನಲ್ಲ ಎಂದು ಮತ್ತೊಂದು ಟ್ವಿಸ್ಟ್ ನೀಡಿದ ಪ್ರಶಾಂತ್ ಕಿಶೋರ್, ಜನರು ನಾಯಕತ್ವದ ಜವಾಬ್ದಾರಿಯನ್ನು ಹೊರಲು ಇದು ಸೂಕ್ತ ಸಮಯ ಎಂದರು.
ಮೂರು ಮುಖ್ಯ ಉದ್ದೇಶಗಳೊಂದಿಗೆ ಜನ್ ಸೂರಜ್ ಪ್ರಯಾಣವನ್ನು ಕೈಗೊಂಡು ಚರ್ಚಿಸಲಾಗಿದೆ. 2.5 ವರ್ಷಗಳ 'ಜನ್ ಸೂರಜ್' ಸುದೀರ್ಘ ಪಯಣ ಅಕ್ಟೋಬರ್ 2ರಂದು ಮಹತ್ವದ ಮೈಲಿಗಲ್ಲನ್ನು ತಲುಪಲಿದೆ. ಇದುವರೆಗಿನ ಪ್ರಯತ್ನದ ಫಲವಾಗಿ ಹೊಸ ರಾಜಕೀಯ ಪಕ್ಷ ಉದಯಿಸಲಿದೆ ಎಂದರು.