ತಿರುವನಂತಪುರ: ಸಾರ್ವಜನಿಕರು, ಪ್ರಯಾಣಿಕರು ಮತ್ತು ಉದ್ಯೋಗಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ವೃದ್ದರು ಸೇರಿದಂತೆ ಎಲ್ಲರಿಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಕೇರಳ ಕೆಎಸ್‍ಆರ್‍ಟಿಸಿ ಸಹಯೋಗದಲ್ಲಿ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ 14 ಡಿಪೋಗಳಲ್ಲಿ ತುರ್ತು ವೈದ್ಯಕೀಯ ಆರೈಕೆ ಘಟಕಗಳನ್ನು ಪ್ರಾರಂಭಿಸಲಿದೆ ಎಂದು ಸಚಿವ ಕೆ. ಬಿ. ಗಣೇಶ್ ಕುಮಾರ್ ಹೇಳಿದರು. ಈ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರುತ್ತವೆ.
ಮೊದಲ ಹಂತದಲ್ಲಿ ತಿರುವನಂತಪುರಂ ಸೆಂಟ್ರಲ್, ಕೊಟ್ಟಾರಕ್ಕರ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಳಂ, ಪಾಲಕ್ಕಾಡ್, ಕೋಝಿಕ್ಕೋಡ್, ಸುಲ್ತಾನ್ ಬತ್ತೇರಿ, ಕಣ್ಣೂರು, ಕಾಸರಗೋಡು, ನೆಯ್ಯಾಟ್ಟಿಂಗರ, ನೆಡುಮಂಗಾಡ ಮತ್ತು ತ್ರಿಶೂರ್ ಎಂಬ 14 ಕೆಎಸ್‍ಆರ್‍ಟಿಸಿ ಘಟಕಗಳಲ್ಲಿ ತುರ್ತು ವೈದ್ಯಕೀಯ ಆರೈಕೆ ಘಟಕಗಳನ್ನು ಆರಂಭಿಸಲಾಗುವುದು.