ಇಂಫಾಲ: ಬಿಷ್ಣುಪುರ ಹಾಗೂ ಇಂಫಾಲ ಪೂರ್ವ ಜಿಲ್ಲೆಯ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಡ್ರೋನ್‌ಗಳು ಹಾರಾಡಿದ್ದು, ಗ್ರಾಮಸ್ಥರು ಭಯದಿಂದ ವಿದ್ಯುತ್ ದೀಪಗಳನ್ನು ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಉಗ್ರಗಾಮಿಗಳು ಡ್ರೋನ್ ಬಳಸಿ ಬಾಂಬ್ ದಾಳಿ ನಡೆಸಿದ್ದರು. ಶುಕ್ರವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ನರೈನ್‌ಸೇನಾ, ನಂಬೊಲ್ ಕಮೊಂಗ್ ಹಾಗೂ ಇಂಫಾಲ ಪೂರ್ವ ಜಿಲ್ಲೆಯ ಪುಖಾವ್, ದೊಲಾಯತಬಿ ಮತ್ತು ಶಾಂತಿಪುರ ಪ್ರದೇಶಗಳಲ್ಲಿ ಡ್ರೋನ್‌ಗಳು ಹಾರಾಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಜನ ಮನೆಯ ವಿದ್ಯುತ್ ಲೈಟ್ ನಂದಿಸಿದ್ದಾರೆ.
ಹೊರವಲಯಗಳಲ್ಲಿ ಭದ್ರತಾ ಪಡೆಗಳು ತೀವ್ರ ಕಣ್ಗಾವಲು ಹಾಕಿವೆ.
ಬಿಷ್ಣುಪುರ ಜಿಲ್ಲೆಯ ಆಕಾಶದಲ್ಲಿ ಸ್ಫೋಟದ ಕಿಡಿಗಳು ಗೋಚರಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಯಾಗಿದೆ. ಭದ್ರತಾ ಪಡೆಗಳು ಅಥವಾ ಬೇರೆ ಯಾರದರೂ ಗುಂಡು ಹಾರಿಸಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.