ವಾಷಿಂಗ್ಟನ್: ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೆರವಾಗುವಂತೆ ಬಿಜೆಪಿಯ ವಿದೇಶಿ ಮಿತ್ರರನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.
ಅಮೆರಿಕಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ವೇಳೆ ಬಿಜೆಪಿಯ ಸಾಗರೋತ್ತರ ಸ್ನೇಹಿತರೊಂದಿಗೆ (ಒಎಫ್‌ಬಿಜೆಪಿ) ನ್ಯೂಯಾರ್ಕ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮೋದಿ ಮನವಿ ಮಾಡಿದ್ದಾರೆ ಎಂದು ಒಎಫ್‌ಬಿಜೆಪಿ ಅಧ್ಯಕ್ಷ ಅಡಪ ಪ್ರಸಾದ್ ತಿಳಿಸಿದ್ದಾರೆ.
'ಒಎಫ್‌ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ, ಸೆಪ್ಟೆಂಬರ್ 23ರಂದು ಭೇಟಿಯಾಯಿತು. ಈ ವೇಳೆ ಮೋದಿ ಅವರು, ವಿದೇಶದಲ್ಲಿರುವ ಭಾರತೀಯರೇ ಭಾರತದ ರಾಯಭಾರಿಗಳು ಎಂದು ಹೇಳಿದರು. ಹಾಗೆಯೇ, ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಮೆರಿಕದಲ್ಲಿ ಕೆಲಸ ಮಾಡುವಂತೆ ಒಎಫ್‌ಬಿಜೆಪಿ ಸದಸ್ಯರನ್ನು ಕೋರಿದರು' ಎಂದು ಪ್ರಸಾದ್ ಹೇಳಿದ್ದಾರೆ.
ಈ ಸಭೆ ಬೆನ್ನಲ್ಲೇ, ಅಮೆರಿಕದಾದ್ಯಂತ ಇರುವ ಒಎಫ್‌ಬಿಜೆಪಿ ಸದಸ್ಯರೊಂದಿಗೆ ವರ್ಚುವಲ್ ಆಗಿ ಸಭೆ ನಡೆಸಿ, ಮೋದಿ ಅವರ ಸಂದೇಶವನ್ನು ರವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ಪ್ರಸಾದ್ ತಿಳಿಸಿದ್ದಾರೆ.
ಇದು ಎರಡೂ ದೇಶಗಳ ನಡುವಣ ಬಾಂಧವ್ಯ ವೃದ್ಧಿಸಲು ನೆರವಾಗಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ತವರು ಡೆಲವೇರ್ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿ ಸೆಪ್ಟೆಂಬರ್ 21 ರಂದು ಆಯೋಜಿಸಿದ್ದ 'ಕ್ವಾಡ್' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಮರುದಿನ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 22ರಂದು ವಿಶ್ವಸಂಸ್ಥೆಯ ಮಹಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.