ನವದೆಹಲಿ: ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಯಾವುದೇ ಸಾಧನಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ವೀಕ್ಷಿಸುವುದು ಪೋಕ್ಸೊ ಕಾಯ್ದೆ ಅಡಿಯಲ್ಲಿ 'ಅಪರಾಧ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ಪೀಠ ತನ್ನ ಮಹತ್ವದ ತೀರ್ಪಿನಲ್ಲಿ, 'ಮಕ್ಕಳ ಅಶ್ಲೀಲ ವಸ್ತು' ಎಂಬುದರ ಬದಲು 'ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ನಿಂದನೆಯ ವಸ್ತು' ಎಂದು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಂತಹ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ವೀಕ್ಷಿಸುವುದು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಅಪರಾಧವಾಗುತ್ತದೆ ಎಂಬುದನ್ನು ಪೀಠ ವಿವರಿಸಿದೆ.
ವಿದ್ಯುನ್ಮಾನ ಸಾಧನಗಳಲ್ಲಿ ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ವೀಕ್ಷಿಸುವುದು ಪೋಕ್ಸೊ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ತಳ್ಳಿಹಾಕಿದೆ.
ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ವೀಕ್ಷಿಸಿದ್ದಕ್ಕಾಗಿ 28 ವರ್ಷದ ಆರೋಪಿ ಎಸ್. ಹರೀಶ್ ಎಂಬಾತನ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್, ಇದೇ ವರ್ಷ ಜನವರಿ 11ರಂದು ರದ್ದು ಮಾಡಿತ್ತು.
ಇದನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.