ವಾಷಿಂಗ್ಟನ್: ಭಾರತದಲ್ಲಿ ಇರುವುದು ಒಂದೇ ಬಗೆಯ ಚಿಂತನಾಕ್ರಮ ಎಂಬ ನಂಬಿಕೆ ಆರ್‌ಎಸ್‌ಎಸ್‌ನಲ್ಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದರು. ಭಾರತದ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ವಿನಯ ಕಾಣುತ್ತಿಲ್ಲ ಎಂದು ಅವರು ಹೇಳಿದರು.
'ಮಹಿಳೆಯರು ನಿರ್ದಿಷ್ಟ ಹೊಣೆ ನಿಭಾಯಿಸುವುದಕ್ಕೆ ಸೀಮಿತರಾಗಬೇಕು ಎಂಬ ನಂಬಿಕೆಯು ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ ಇದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಅವರು ಭಾರತ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು. ರಾಹುಲ್ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಅನಿವಾಸಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ್ದು ಇದೇ ಮೊದಲು.
'ಭಾರತದಲ್ಲಿರುವುದು ಒಂದೇ ಬಗೆಯ ಚಿಂತನಾಕ್ರಮ ಎಂದು ಆರ್‌ಎಸ್‌ಎಸ್ ನಂಬಿದೆ. ಆದರೆ, ಭಾರತದಲ್ಲಿ ಹಲವು ಬಗೆಯ ಚಿಂತನಾಕ್ರಮಗಳು ಇವೆ ಎಂದು ನಾವು ನಂಬಿದ್ದೇವೆ' ಎಂದು ಅವರು ಹೇಳಿದರು. 'ಅಮೆರಿಕದಲ್ಲಿ ಇರುವಂತೆಯೇ ಜಾತಿ, ಭಾಷೆ, ಧರ್ಮ, ಸಂಪ್ರದಾಯ, ಹಿನ್ನೆಲೆಗಳನ್ನು ಮೀರಿ ಎಲ್ಲರಿಗೂ ಕನಸು ಕಾಣಲು, ಭಾಗವಹಿಸಲು ಅವಕಾಶ ಇರಬೇಕು ಎಂಬುದು ನಮ್ಮ ನಂಬಿಕೆ' ಎಂದರು.
'ಇದೊಂದು ಹೋರಾಟ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನದ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ ಎಂಬುದನ್ನು ದೇಶದ ಕೋಟ್ಯಂತರ ಜನ ಚುನಾವಣೆಯ ಹೊತ್ತಿನಲ್ಲಿ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಾಗ ಈ ಹೋರಾಟವು ಹರಳುಗಟ್ಟಿತು' ಎಂದರು.
'ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಯಾವ ಪಕ್ಷದಲ್ಲಿಯೂ ಪ್ರೀತಿ, ಗೌರವ ಮತ್ತು ವಿನಯ ಕಾಣಿಸುತ್ತಿಲ್ಲ. ಮನುಷ್ಯರೆಲ್ಲರ ಬಗ್ಗೆ ಪ್ರೀತಿಯಿರಬೇಕು; ಒಂದು ಧರ್ಮದ, ಒಂದು ಸಮುದಾಯದ, ಒಂದು ಜಾತಿಯ, ಒಂದು ಭಾಷೆಯ ಜನರ ಬಗ್ಗೆ ಮಾತ್ರ ಅಲ್ಲ' ಎಂದು ಅವರು ವಿವರಿಸಿದರು.
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದ ಅವರು, 'ಬಿಜೆಪಿಯು ನಮ್ಮ ಸಂಪ್ರದಾಯ, ಭಾಷೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ಜನ ಹೇಳುತ್ತಿದ್ದರು. ಸಂವಿಧಾನದ ಮೇಲೆ ದಾಳಿ ನಡೆಸುವವರು ನಮ್ಮ ಧಾರ್ಮಿಕ ಸಂಪ್ರದಾಯದ ಮೇಲೆಯೂ ದಾಳಿ ನಡೆಸುತ್ತಿದ್ದಾರೆ ಎಂಬುದನ್ನು ಅವರು ಅರ್ಥ ಮಾಡಿಕೊಂಡರು. ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಭಾರತದಲ್ಲಿ ಯಾರಿಗೂ ಬಿಜೆಪಿ ಬಗ್ಗೆ, ಪ್ರಧಾನಿಯ ಬಗ್ಗೆ ಭಯ ಉಳಿಯಲಿಲ್ಲ. ಇದು ಭಾರತದ ಜನರ ದೊಡ್ಡ ಸಾಧನೆ...' ಎಂದು ಹೇಳಿದರು.
'ಕೌಶಲವನ್ನು ಗೌರವಿಸುತ್ತಿಲ್ಲ': ಕೌಶಲ ಇರುವ ಲಕ್ಷಾಂತರ ಜನರನ್ನು ಭಾರತದಲ್ಲಿ ಉಪೇಕ್ಷಿಸಲಾಗುತ್ತಿದೆ ಎಂದು ರಾಹುಲ್ ಹೇಳಿದರು. ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಈ ಮಾತು ಹೇಳಿದ ಅವರು ಮಹಾಭಾರತದ ಏಕಲವ್ಯನ ಕಥೆಯನ್ನು ಉದಾಹರಿಸಿದರು.
ಭಾರತದಲ್ಲಿ ಕೌಶಲಕ್ಕೆ ಕೊರತೆ ಇಲ್ಲ, ಆದರೆ ಕೌಶಲವನ್ನು ಗೌರವಿಸುವುದರಲ್ಲಿ ಕೊರತೆ ಇದೆ ಎಂದರು. 'ನಿಮಗೆ ಏಕಲವ್ಯನ ಬಗ್ಗೆ ಗೊತ್ತೇ? ಭಾರತದಲ್ಲಿ ಏಕಲವ್ಯನ ಕಥೆ ಪ್ರತಿದಿನವೂ ಲಕ್ಷಾಂತರ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿದೆ. ಕೌಶಲ ಇರುವ ಜನರನ್ನು ಬೆಳೆಯಲು, ಕೆಲಸ ಮಾಡಲು ಬಿಡುತ್ತಿಲ್ಲ. ಇದು ಎಲ್ಲೆಡೆಯೂ ಆಗುತ್ತಿದೆ' ಎಂದು ರಾಹುಲ್ ಹೇಳಿರುವುದಾಗಿ ಕಾಂಗ್ರೆಸ್‌ನ 'ಎಕ್ಸ್' ಖಾತೆಯಲ್ಲಿ ಬರೆಯಲಾಗಿದೆ.
ದೇಶದ ಜನಸಂಖ್ಯೆಯ ಶೇ 1-2ರಷ್ಟು ಜನರನ್ನು ಮಾತ್ರ ಸಬಲರನ್ನಾಗಿಸುವುದರಿಂದ ದೇಶದ ಶಕ್ತಿಯು ಹೊರಹೊಮ್ಮುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರಾಹುಲ್ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಇಲ್ಲಿ ಭಾರತ ಮೂಲದವರ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಅಮೆರಿಕದ ಜನಪ್ರತಿನಿಧಿಗಳನ್ನು ಭೇಟಿ ಮಾಡುವ ಉದ್ದೇಶ ಅವರಿಗಿದೆ.