ಕೀವ್: ರಷ್ಯಾ ಸೇನೆಯು ಭಾನುವಾರ ಉಕ್ರೇನ್‌ನ 125 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡೂ ದೇಶಗಳ ನಡುವೆ ಯುದ್ಧ ಆರಂಭವಾದ ಬಳಿಕ (2022ರ ಫೆಬ್ರುವರಿ 22ರಂದು) ಒಂದೇ ದಿನ ಉಕ್ರೇನ್, ಇಷ್ಟು ದೊಡ್ಡ ಪ್ರಮಾಣದ ಡ್ರೋನ್ ದಾಳಿ ನಡೆಸಿದ್ದು ಇದೇ ಮೊದಲು.
'ರಷ್ಯಾದ ಏಳು ಪ್ರಾಂತ್ಯಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದಿದೆ. ವೊಲ್ಗೊಗ್ರಾಡ್ ಮೇಲೆ ಅತಿಹೆಚ್ಚು ಅಂದರೆ 67 ಡ್ರೋನ್‌ಗಳನ್ನು ಹಾರಿ ಬಿಡಲಾಗಿತ್ತು. ವೊರೊನೆಝ್ ಪ್ರಾಂತ್ಯದಲ್ಲಿ 17 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇಲ್ಲಿ ಡ್ರೋನ್‌ಗಳ ಅವಶೇಷ ಬಿದ್ದು ವಸತಿ ಸಮುಚ್ಛಯ ಹಾಗೂ ಒಂದು ಮನೆಗೆ ಹಾನಿಯಾಗಿದೆ' ಎಂದು ಮೂಲಗಳು ತಿಳಿಸಿವೆ.
'ರೊಸ್ತೊವ್ ಪ್ರಾಂತ್ಯದ ಮೇಲೆ 18 ಡ್ರೋನ್‌ಗಳು ಹಾರಿಬಂದವು. ಡ್ರೋನ್ ಅವಶೇಷ ಬಿದ್ದಾಗ ಉಂಟಾದ ಬೆಂಕಿಯಿಂದ 20 ಹೆಕ್ಟೇರ್‌ನಷ್ಟು ಕಾಡು ನಾಶವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಟ ಮುಂದುವರಿಸಿದ್ದಾರೆ' ಎಂದು ಇಲ್ಲಿನ ಗವರ್ನರ್ ವಾಸಿಲಿ ಗೊಲುಬೆವ್ ಮಾಹಿತಿ ನೀಡಿದ್ದಾರೆ.
14 ಮಂದಿಗೆ ಗಾಯ: ದಕ್ಷಿಣ ಉಕ್ರೇನ್‌ನ ಝಪೊರಿಝಿಯಾ ನಗರದ ಮೇಲೆ ರಷ್ಯಾ ಸೇನೆ ಶನಿವಾರ ರಾತ್ರಿಯಿಡೀ ಕ್ಷಿಪಣಿ ದಾಳಿ ನಡೆಸಿದ್ದು, 14 ಮಂದಿ ಗಾಯಗೊಂಡಿದ್ದಾರೆ.
'ಬಹುಮಹಡಿ ಕಟ್ಟಡಗಳು ಮತ್ತು ವಸತಿ ಸಮುಚ್ಛಯಗಳಿಗೆ ಹಾನಿ ಉಂಟಾಗಿದೆ. ರೈಲ್ವೆ ಮೂಲಸೌಕರ್ಯದ ಮೇಲೂ ದಾಳಿ ನಡೆದಿದ್ದು, ನಗರದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.