ಹೈದರಾಬಾದ್: ತಿರುಪತಿಯ ಲಾಡು ಕಲಬೆರಕೆ ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನೇಮಕ ಮಾಡಿರುವ ವಿಶೇಷ ತಂಡವು (ಎಸ್‌ಐಟಿ) ಶನಿವಾರ ತನ್ನ ಕೆಲಸ ಆರಂಭಿಸಿದೆ. ಎಸ್‌ಐಟಿ ಮುಖ್ಯಸ್ಥ, ಗುಂಟೂರು ಐ.ಜಿ ಸರ್ವಶ್ರೇಷ್ಠ ತ್ರಿಪಾಠಿ ಅವರು ತಮ್ಮ ತಂಡದ ಜೊತೆ ತಿರುಪತಿ ತಲುಪಿದ್ದಾರೆ.
ಟಿಟಿಡಿಯ ಕೆಲವು ಸಿಬ್ಬಂದಿ ಜೊತೆ ಎಸ್‌ಐಟಿ ತಂಡವು ಚರ್ಚೆ ನಡೆಸಿತು. ಅಲ್ಲದೆ, ತಮಿಳುನಾಡು ಮೂಲದ ಎ.ಆರ್. ಡೈರಿ ವಿರುದ್ಧ ದೂರು ದಾಖಲಾಗಿರುವ ತಿರುಪತಿ ಪಶ್ಚಿಮ ಪೊಲೀಸ್ ಠಾಣೆಯ ಸಿಬ್ಬಂದಿ ಜೊತೆಯೂ ಎಸ್‌ಐಟಿ ತಂಡವು ಮಾತುಕತೆ ನಡೆಸಿತು.
ಟಿಟಿಡಿ ಕಾರ್ಯನಿರ್ವಹಣಾ ಅಧಿಕಾರಿ ಜೆ. ಶ್ಯಾಮಲ ರಾವ್ ಅವರ ಜತೆ ತ್ರಿಪಾಠಿ ಅವರು ಮಾತುಕತೆ ನಡೆಸಿದರು. ಎಸ್‌ಐಟಿ ಸದಸ್ಯರು ಮುಂದಿನ ಮೂರು ಅಥವಾ ನಾಲ್ಕು ದಿನಗಳವರೆಗೆ ತಿರುಮಲ ದೇವಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಗೊತ್ತಾಗಿದೆ.
ಧರ್ಮನಿರಪೇಕ್ಷತೆ ವಿಚಾರವಾಗಿ ವೈಎಸ್‌ಆರ್‌ಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ಆಡಿರುವ ಮಾತುಗಳನ್ನು ಉಲ್ಲೇಖಿಸಿ ಅವರ ವಿರುದ್ಧ ಟಿಡಿಪಿ ವಾಗ್ದಾಳಿ ತೀವ್ರಗೊಳಿಸಿದೆ.
'ಜಗನ್ ರೆಡ್ಡಿ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ, ಅವರಿಗೆ ತಿರುಮಲಕ್ಕೆ ತೆರಳಲು ಇಷ್ಟವಿಲ್ಲ. ಹೀಗಾಗಿ ಅವರು ಸೆಕ್ಷನ್ 30ನ್ನು ನೆಪವಾಗಿ ಉಲ್ಲೇಖಿಸುತ್ತಿದ್ದಾರೆ. ಅವರು ತಿರುಮಲಕ್ಕೆ ತೆರಳುವುದನ್ನು ಯಾರೂ ತಡೆದಿಲ್ಲ' ಎಂದು ರಾಜ್ಯದ ಗೃಹ ಸಚಿವೆ ವೆಂಗಲಪುಡಿ ಅನಿತಾ ಹೇಳಿದರು.
'ತಿರುಮಲಕ್ಕೆ ಭೇಟಿ ನೀಡುವುದಾಗಿ ಹೇಳಿದ ನಂತರ ಅವರು ಒಪ್ಪಲಾಗದ ಕಾರಣ ನೀಡಿ ಹಿಂದೆ ಸರಿದರು. ಜಗನ್ ರೆಡ್ಡಿ ಅವರು 10 ಸಾವಿರ ಜನರೊಂದಿಗೆ ತಿರುಮಲಕ್ಕೆ ಭೇಟಿ ನೀಡುತ್ತಾರೆ ಎಂಬ ಪ್ರಚಾರವು ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿತ್ತು. ಅವರ ಭೇಟಿಗೆ ಅಡ್ಡಿಪಡಿಸುವುದಾಗಿ ಸಾರ್ವಜನಿಕ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಹೇಳಿದ್ದವು. ಹೀಗಾಗಿ ಪೊಲೀಸರು, ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗದಿರಲಿ ಎಂಬ ಕಾರಣಕ್ಕೆ ಪೊಲೀಸ್ ಕಾಯ್ದೆಯ ಸೆಕ್ಷನ್ 30ನ್ನು ಜಾರಿಗೊಳಿಸಿದರು. ಶಾಂತಿಗೆ ಭಂಗ ಉಂಟಾಗದಿರಲಿ ಎಂದು ಇದನ್ನು ಯಾವಾಗಲೂ ಬಳಕೆ ಮಾಡಲಾಗುತ್ತದೆ. ಜಗನ್ ಅವರು ಮಾಧ್ಯಮಗಳ ಬಳಿ ಇದನ್ನು ತಪ್ಪಾಗಿ ಉಲ್ಲೇಖಿಸಿ, ಸುಳ್ಳುಗಳನ್ನು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ' ಎಂದು ದೂರಿದರು.
ಧರ್ಮನಿರಪೇಕ್ಷತೆ ವಿಚಾರವಾಗಿ ಆಡಿರುವ ಮಾತುಗಳಿಗಾಗಿ ಜಗನ್ ಅವರನ್ನು ತಕ್ಷಣವೇ ದೇಶದಿಂದ ಹೊರಹಾಕಬೇಕು ಎಂದು ಇಂಧನ ಸಚಿವ ಗೊಟ್ಟಿಪತಿ ರವಿ ಕುಮಾರ್ ಆಗ್ರಹಿಸಿದರು. 'ಜಗನ್ ಅವರು, ಎಂತಹ ದೇಶದಲ್ಲಿ ನಾವಿದ್ದೇವೆ ಎಂದು ಆಡಿರುವ ಮಾತನ್ನು ತಕ್ಷಣವೇ ಹಿಂಪಡೆಯಬೇಕು. ಪ್ರತಿ ಧರ್ಮವೂ ಕೆಲವು ತತ್ವ ಮತ್ತು ನಂಬಿಕೆಗಳನ್ನು ಹೊಂದಿರುತ್ತದೆ. ಅವುಗಳನ್ನು ಗೌರವಿಸುವುದರಿಂದ ಮಾತ್ರವೇ ದೇಶದ ಉತ್ತಮ ಪ್ರಜೆಯಾಗಬಹುದು. ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯಗಳನ್ನು ಹಗುರವಾಗಿ ಕಾಣುವ ಮೂಲಕ ಜಗನ್ ಅವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವುದು ದುರದೃಷ್ಟಕರ' ಎಂದು ರವಿ ಕುಮಾರ್ ಹೇಳಿದರು.
ಈ ನಡುವೆ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತುಪ್ಪವನ್ನು ಕಲಬೆರಕೆ ಮಾಡಲಾಗಿದೆ ಎಂಬ ಸುಳ್ಳು ಹೇಳಿ ತಿರುಮಲ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆ ಎಂದು ವೈಎಸ್‌ಆರ್‌ಸಿಪಿ ನಾಯಕರು ಆರೋಪಿಸಿದ್ದಾರೆ. ಅಲ್ಲದೆ, ಅವರು ಹೇಳಿರುವ 'ಸುಳ್ಳಿಗೆ ಪ್ರಾಯಶ್ಚಿತ್ತವಾಗಿ' ರಾಜ್ಯದಾದ್ಯಂತ ಪೂಜೆ ನಡೆಸಿದರು.