ಬೆಂಗಳೂರು: ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದ ದೇಶದಾದ್ಯಂತ ಸದ್ದು ಮಾಡಿದೆ. ಈ ನಡುವೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ತುಪ್ಪವನ್ನು ಪೂರೈಸಿದೆ ಎಂಬ ಹೇಳಿಕೆಯನ್ನು ಗುಜರಾತಿನ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರ್ಯಾಂಡ್ ಅಮೂಲ್ ತಳ್ಳಿಹಾಕಿದೆ.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮೂಲ್ ತುಪ್ಪವನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮೂಲ್, 'ತಾನು ಎಂದಿಗೂ ಟಿಟಿಡಿಗೆ ತುಪ್ಪವನ್ನು ಪೂರೈಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ತನ್ನ ವಿರುದ್ಧದ ಈ ಅಪಪ್ರಚಾರವನ್ನು ನಿಲ್ಲಿಸುವಂತೆ' ತಿಳಿಸಿದೆ.
'ಅಮೂಲ್ ತುಪ್ಪವನ್ನು ಐಎಸ್‌ಒ ಪ್ರಮಾಣೀಕರಿಸಿದ ನಮ್ಮ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳಲ್ಲಿ ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ. ತಮ್ಮ ಉತ್ಪನ್ನಗಳಿಗೆ ಬಳಸುವ ಹಾಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮಾರ್ಗಸೂಚಿಗಳ ಪ್ರಕಾರ ಕಲಬೆರಕೆ ಪತ್ತೆ ಸೇರಿದಂತೆ ಕಠಿಣ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ' ಎಂದು ಹೇಳಿದೆ.
50 ವರ್ಷಗಳಿಂದ ಭಾರತದಲ್ಲಿ ಮನೆಮಾತಾಗಿರುವ ಅಮೂಲ್ ತುಪ್ಪವನ್ನ ತಯಾರಿಸುವಲ್ಲಿ ಅನುಸರಿಸುವ ಕಠಿಣ ಉತ್ಪಾದನಾ ಮಾನದಂಡಗಳ ಬಗ್ಗೆಯೂ ಸ್ಪಷ್ಟಪಡಿಸಿದೆ.
ತುಪ್ಪದಲ್ಲಿ ಹಂದಿ ಕೊಬ್ಬು- ಟಿಟಿಡಿ ಇ.ಒ
ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಹಂದಿ ಕೊಬ್ಬು ಸೇರಿದಂತೆ ಇತರ ಪ್ರಾಣಿಗಳ ಕೊಬ್ಬಿನ ಅಂಶ ಇರುವುದನ್ನು ಪ್ರಯೋಗಾಲಯದ ಪರೀಕ್ಷೆಗಳು ಬಹಿರಂಗಪಡಿಸಿವೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ ಕಾರ್ಯನಿರ್ವಹಣಾ ಅಧಿಕಾರಿ ಜೆ. ಶ್ಯಾಮಲ ರಾವ್ ಶುಕ್ರವಾರ ಹೇಳಿದ್ದಾರೆ.
ದೇವಸ್ಥಾನದಲ್ಲಿ ಕಲಬೆರಕೆ ಪರೀಕ್ಷೆ ಮಾಡಲು ಸೌಲಭ್ಯಗಳು ಇಲ್ಲ ಎಂಬ ಕೊರತೆಯ ಲಾಭವನ್ನು ತುಪ್ಪ ಪೂರೈಕೆದಾರರು ಪಡೆದುಕೊಂಡಿದ್ದರಿಂದ ಈ ಲೋಪ ಆಗಿದೆ ಎಂದು ಅವರು ತಿಳಿಸಿದ್ದಾರೆ.