ಹೈದರಾಬಾದ್: ತಿರುಮಲ ತಿರುಪತಿ ವೆಂಕಟೇಶ್ವರ ದೇಗುಲದ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿಷಯ ಕುರಿತು ನಡೆಯುತ್ತಿರುವ ವ್ಯಾಪಕ ಚರ್ಚೆಯು, ಇದೀಗ ನಟರಾದ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರಾಜ್ ನಡುವೆಯೂ ಏರ್ಪಟ್ಟಿದೆ.
'ಭಾರತದಲ್ಲಿ ದೇವಾಲಯಗಳನ್ನು ರಕ್ಷಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಸನಾತನ ಧರ್ಮ ರಕ್ಷಣಾ ಮಂಡಳಿಯನ್ನು ರಚಿಸುವ ಸಕಾಲ ಇದಾಗಿದೆ. ಈ ಕುರಿತಂತೆ ನೀತಿ ನಿರೂಪಕರು, ಧಾರ್ಮಿಕ ಮುಖಂಡರು, ನ್ಯಾಯಾಂಗ, ನಾಗರಿಕರು, ಮಾಧ್ಯಮ ಹಾಗೂ ಇತರರು ಸೇರಿ ರಾಷ್ಟ್ರಮಟ್ಟದ ಚರ್ಚೆ ನಡೆಸಬೇಕಿದೆ. ಸನಾತನ ಧರ್ಮವನ್ನು ಅಪವಿತ್ರಗೊಳಿಸುವ ಕೃತ್ಯಕ್ಕೆ ಇತಿಶ್ರೀ ಹಾಡಬೇಕಿದೆ' ಎಂದಿದ್ದರು.
ಪವನ್ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ನಟ ಪ್ರಕಾಶ್ ರಾಜ್, 'ಪ್ರೀತಿಯ ಪವನ್ ಕಲ್ಯಾಣ್, ನೀವು ಉಪಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲೇ ಈ ಘಟನೆ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು, ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಏಕೆ ಆತಂಕ ಹುಟ್ಟಿಸುತ್ತಿದ್ದೀರಿ. ಈಗಾಗಲೇ ದೇಶವ್ಯಾಪಿ ಸಾಕಷ್ಟು ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ' ಎಂದಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದವರಿಗೆ ನೀಡಲಾಗುವ ಲಡ್ಡು ಪ್ರಸಾದ ಈಗ ವಿವಾದ ಸ್ವರೂಪ ಪಡೆದಿದೆ. ಲಡ್ಡುವಿನಲ್ಲಿ ಗೋವು, ಹಂದಿಯ ಚರ್ಬಿ, ಮೀನಿನ ಎಣ್ಣೆ ಬೆರೆಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿಕೆ, ಗುಜರಾತ್‌ನ ಪ್ರಯೋಗಾಲಯದ ವರದಿಯು ಈಗ ರಾಜಕೀಯ ಜಟಾಪಟಿಯ ಜತೆಗೆ, ಜನರಲ್ಲೂ ಆತಂಕ ಮೂಡಿಸಿದೆ.
ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ತಿರುಪತಿ ಲಾಡು ವಿತರಿಸಲಾಗಿದೆ: ಮುಖ್ಯ ಅರ್ಚಕ
ಆಂಧ್ರಪ್ರದೇಶದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್ ರೆಡ್ಡಿ ವಿರುದ್ಧ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದೇವಸ್ಥಾನವನ್ನು ಅಪವಿತ್ರಗೊಳಿಸಿದ ಆರೋಪ ಮಾಡಿದ್ದಾರೆ.
ಘಟನೆ ನಂತರ ದೇವಸ್ಥಾನವನ್ನು ಶುದ್ಧೀಕರಿಸಲಾಗುವುದು ಎಂದಿರುವ ಮುಖ್ಯಮಂತ್ರಿ ನಾಯ್ಡು, 'ತುಪ್ಪ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿರುವ ಪರಿಣಾಮ, ಕಳಪೆ ಗುಣಮಟ್ಟದ ಹಾಗೂ ಕಲಬೆರೆಕೆಯಾದ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಪ್ರತಿ ದಿನ ಸುಮಾರು 3 ಲಕ್ಷ ಲಾಡು ಬೇಡಿಕೆ ಇರುವ ಪ್ರಸಿದ್ಧ ಹಾಗೂ ಪವಿತ್ರ ತಿರುಪತಿ ಲಾಡುವಿಗೆ ಕಲಬೆರಕೆ ಮಾಡುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಾಗಿದೆ' ಎಂದು ಆರೋಪಿಸಿದ್ದರು.
ಈ ಕುರಿತಂತೆ ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರು ಪ್ರತಿಕ್ರಿಯಿಸಿ, 'ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಪತಿಯಲ್ಲಿ 'ಲಾಡು' ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದರು' ಎಂದು ಹೇಳಿಕೆ ನೀಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ವರದಿ ಕೇಳಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ಮಾಹಿತಿ ಕೇಳಿದ್ದಾರೆ. ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಆರೋಪ ಕುರಿತು ತನಿಖೆ ನಡೆಸುವಂತೆ ಹೇಳಿದ್ದಾರೆ.
ತಿರುಪತಿ ದೇವಸ್ಥಾನದ ಲಾಡು ಪ್ರಸಾದದ ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸಲಾಗಿದ್ದು ಪ್ರಸಾದ ಇದೀಗ ಕಳಂಕರಹಿತ ಎಂದು ತಿರುಮಲ ತಿರುಪತಿ ದೇವಸ್ಥಾನದ ಸಮಿತಿ (ಟಿಟಿಡಿ) ಹೇಳಿದೆ.