ನವದೆಹಲಿ: ಕಂದಹಾರ್ ಹೈಜಾಕ್ ಎಂದೇ ಕುಖ್ಯಾತಿ ಪಡೆದಿದ್ದ 1999ರ ಇಂಡಿಯನ್ ಏರ್‌ಲೈನ್ಸ್ ಐಸಿ 814 ವಿಮಾನ ಅಪಹರಣ ಪ್ರಕರಣದ ಕಥಾವಸ್ತು ಆಧಾರಿತ ವೆಬ್ ಸರಣಿಗಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ ಅವರಿಗೆ ಮಾಹಿತಿ ಹಾಗೂ ಪ್ರಸಾರ ಇಲಾಖೆ ನೋಟಿಸ್ ನೀಡಿದೆ.
ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದ್ದೀನ್ ಭಯೋತ್ಪಾದಕ ತಂಡವು ಭಾರತದ ವಿಮಾನವನ್ನು ಅಪಹರಿಸಿತ್ತು. ಆದರೆ ಐಸಿ 814 ಚಿತ್ರದಲ್ಲಿ ಅಪಹರಣಕಾರರ ಹೆಸರನ್ನು ಉದ್ದೇಶಪೂರ್ವಕವಾಗಿ 'ಭೋಲಾ' ಮತ್ತು 'ಶಂಕರ್' ಎಂದು ಹೆಸರಿಸಲಾಗಿದೆ ಎಂಬ ಆರೋಪದಡಿ ಗೃಹ ಇಲಾಖೆ ನೋಟಿಸ್ ನೀಡಿದೆ.
1999ರ ಡಿ. 24ರಂದು ಇಂಡಿಯನ್ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನವನ್ನು ಅಪಹರಿಸಲಾಗಿತ್ತು. ವಿಮಾನದಲ್ಲಿ 191 ಜನ ಪ್ರಯಾಣಿಕರಿದ್ದರು. ಈ ವಿಮಾನವು ನೇಪಾಳದ ಕಠ್ಮಂಡುವಿನಿಂದ ದೆಹಲಿಯತ್ತ ಹೊರಟಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಒಳಗಿದ್ದ ಅಪಹರಣಕಾರರು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಅದು ಅಮೃತಸರ, ಲಾಹೋರ್, ದುಬೈನಲ್ಲಿ ಇಳಿದು, ಅಂತಿಮವಾಗಿ ಆಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಇಳಿಯಿತು.
ಅಪಹರಣಕಾರರ ವಶದಲ್ಲಿದ್ದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತದ ಜೈಲಿನಲ್ಲಿದ್ದ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಹಾಗೂ ಮುಷ್ತಾಕ್ ಅಹ್ಮದ್ ಝರ್ಗಾರ್ ಎಂಬ ಮೂವರು ಉಗ್ರರನ್ನು ಬಿಡುಗಡೆ ಮಾಡುವುದು ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಅನಿವಾರ್ಯವಾಯಿತು. ವರದಿಗಳ ಪ್ರಕಾರ ತಾಲಿಬಾನ್ ಆಡಳಿತವು ಅಪಹರಣಕಾರರಿಗೆ ನೆರವಾಗುವುದರ ಜತೆಗೆ, ಅವರು ಸುರಕ್ಷಿತವಾಗಿ ಪಾಕಿಸ್ತಾನ ತಲುಪಲು ನೆರವಾಗಿತ್ತು ಎಂದೆನ್ನಲಾಗಿದೆ.
2000 ಇಸವಿಯ ಜ. 6ರಂದು ಕೇಂದ್ರ ಸರ್ಕಾರವು ಅಪಹರಣಕಾರರ ಹೆಸರು ಬಿಡುಗಡೆ ಮಾಡಿತ್ತು. ಇಬ್ರಾಹಿಂ ಅತ್ತರ್, ಶಹೀದ್ ಅಖ್ತರ್ ಸಯೀದ್, ಸುನ್ನಿ ಅಹ್ಮದ್ ಖ್ವಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಹಾಗೂ ಶಾಕಿರ್ ಐಸಿ 814 ಅಪಹರಿಸಿದ್ದರು. ವಿಮಾನದೊಳಗಿದ್ದ ಅಪಹರಣಕಾರರು ತಮ್ಮನ್ನು ಪರಸ್ಪರ ಕ್ರಮವಾಗಿ (1) ಚೀಫ್, (2) ಡಾಕ್ಟರ್, (3) ಬರ್ಗರ್, (4) ಭೋಲಾ, (5) ಶಂಕರ್ ಎಂದು ಪರಸ್ಪರ ಸಂಬೋಧಿಸುತ್ತಿದ್ದರು' ಎಂದು ಗೃಹ ಇಲಾಖೆ ಹೇಳಿತ್ತು.
ಇದೀಗ ಈ ಹೆಸರುಗಳ ಬಳಕೆ ವಿರುದ್ಧ ಎದ್ದಿರುವ ವಿವಾದದ ಕುರಿತು ಅಂದು ವಿಮಾನ ಅಪಹರಣಗೊಂಡಾಗ ವರದಿ ಮಾಡಿದ್ದ ಪತ್ರಕರ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅಪಹರಣ ಸಂದರ್ಭದಲ್ಲಿ ಭಯೋತ್ಪಾದಕರು ತಮ್ಮನ್ನು ಈ ಹೆಸರುಗಳ ಮೂಲಕವೇ ಪರಸ್ಪರ ಸಂಬೋಧಿಸುತ್ತಿದ್ದರು ಎಂದಿದ್ದಾರೆ.
ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಸೇರಿದಂತೆ ಪಕ್ಷದ ಇತರ ಮುಖಂಡರು ವೆಬ್ ಸರಣಿ ತಯಾರಕರಾದ ನೆಟ್‌ಫ್ಲಿಕ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ವಿಮಾನ ಅಪಹರಣಕಾರರು ತಮ್ಮನ್ನು ಮುಸ್ಲಿಂ ಗುರುತು ಮರೆಮಾಚಲು ಹೆಸರುಗಳನ್ನು ಬದಲಿಸಿದ್ದರು. ಆದರೆ ಚಿತ್ರ ತಯಾರಕರಾದ ಅನುಭವ ಸಿನ್ಹಾ ಅವರು, ಅಪಹರಣಕಾರರ ಕ್ರಿಮಿನಲ್ ಉದ್ದೇಶವನ್ನು ಕಾನೂನು ಬದ್ಧಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಇದೇ ಸರಣಿಯನ್ನು ಹತ್ತು ವರ್ಷಗಳ ನಂತರ ನೋಡುವವರಿಗೆ ಹಿಂದೂಗಳೇ ವಿಮಾನ ಅಪಹರಿಸಿದ್ದು ಎಂಬ ತಪ್ಪು ಕಲ್ಪನೆ ಮೂಡಲಿದೆ. ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು, ಎಲ್ಲಾ ಮುಸ್ಲಿಮರ ಅಪರಾಧಗಳನ್ನು ಮರೆಮಾಚುವ ಉದ್ದೇಶ ಹೊಂದಲಾಗಿದೆ. 70ರ ದಶಕದ ನಂತರ ಸಿನಿಮಾ ಮಾಧ್ಯಮವನ್ನು ಕಮ್ಯುನಿಸ್ಟರು ತಮ್ಮ ಅನುಕೂಲಕ್ಕಾಗಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದು ಈಗಲೂ ಮುಂದುವರಿದಿದೆ' ಎಂದು ಸಾಮಾಜಿಕ ಮಾದ್ಯಮಗಳಲ್ಲಿ ಆರೋಪಿಸಿದ್ದಾರೆ.
ಐಸಿ814 ವೆಬ್ ಸರಣಿಯನ್ನು ಅನುಭವ ಸಿನ್ಹಾ ಮತ್ತು ತ್ರಿಶಾಂತ್ ಶ್ರೀವಾತ್ಸವ ಅವರು ನಿರ್ದೇಶಿಸಿದ್ದಾರೆ. ದೇವಿ ಶರಣ್ ಅವರ 'ಫೈಟ್ ಇಂಟು ಫಿಯರ್: ದಿ ಕ್ಯಾಪ್ಟನ್ ಸ್ಟೋರಿ' ಹಾಗೂ ಪತ್ರಕರ್ತ ಶ್ರಿಂಜೋಯ್ ಚೌಧರಿ ಅವರ 'ದಿ ಕ್ಯಾಪ್ಟನ್ ಆಫ್ ದಿ ಫ್ಲೈಟ್' ಎಂಬ ಕೃತಿಗಳನ್ನು ಆಧರಿಸಿದೆ ಎಂದು ಸಿರೀಸ್ ತಯಾರಿಕರು ಹೇಳಿದ್ದಾರೆ. ಚಿತ್ರದಲ್ಲಿ ನಸೀರುದ್ದೀನ್ ಶಾ, ವಿಜಯ್ ವರ್ಮಾ ಹಾಗೂ ಪಂಕಜ್ ಕಪೂರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.