ಅಹಮದಾಬಾದ್: ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಮುಂದಿನ 10 ವರ್ಷಗಳಲ್ಲಿ ದೇಶದಾದ್ಯಂತ ಹೊಸದಾಗಿ 75,000 ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದರು.
ನಗರದ ಬಳಿಯ ಅದಲಾಜ್ ಗ್ರಾಮದಲ್ಲಿ 'ಹಿರಾಮಣಿ ಆರೋಗ್ಯಧಾಮ' ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದ ಸಮಗ್ರ ಸುಧಾರಣೆಗೆ ಯೋಜನೆ ರೂಪಿಸಿರುವ ಪ್ರಧಾನಿ ಮೋದಿ ಅವರು ಅದನ್ನು ಜಾರಿಗೊಳಿಸುತ್ತಿದ್ದಾರೆ ಎಂದರು.
ಹಲವು ಕಾಯಿಲೆಗಳಿಗೆ ಕಾರಣವಾದ ಅನೈರ್ಮಲ್ಯ ವ್ಯವಸ್ಥೆಯನ್ನು ತೊಲಗಿಸಲು ಪ್ರಧಾನಿ ಮೋದಿ ಅವರು ಮೊದಲಿಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು. ಬಳಿಕ ಶುದ್ಧ ಕುಡಿಯುವ ನೀರು, ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದರು. ಆನಂತರ ಯೋಗವನ್ನು ಜನಪ್ರಿಯಗೊಳಿಸಿದ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಿದರು ಎಂದು ಅಮಿತ್ ಶಾ ವಿವರಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದರು. ಅದರ ಜತೆಗೆ ದೇಶದಾದ್ಯಂತ ಹೊಸ ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಆಗುವಂತೆ ಮಾಡಿದರು ಎಂದು ಹೇಳಿದರು.
'ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿಯೂ 14 ವಿಭಾಗಗಳನ್ನು ಒಳಗೊಂಡ ಆಸ್ಪತ್ರೆಗಳು ಬಂದಿವೆ. ಇದೀಗ ನಾವು ಮುಂದಿನ 10 ವರ್ಷಗಳಲ್ಲಿ ಹೆಚ್ಚುವರಿಯಾಗಿ 75,000 ವೈದ್ಯಕೀಯ ಸೀಟುಗಳು ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದ್ದೇವೆ' ಎಂದು ಅಮಿತ್ ಶಾ ತಿಳಿಸಿದರು.
ಅಲ್ಲದೆ, ಜನರಿಗೆ ಕಡಿಮೆ ಬೆಲೆಗೆ ಜೆನೆರಿಕ್ ಔಷಧಿಗಳು ದೊರೆಯಲಿ ಎಂಬ ಉದ್ದೇಶದಿಂದ ದೇಶದಾದ್ಯಂತ ಜೆನರಿಕ ಔಷಧಾಲಯಗಳ ಸ್ಥಾಪನೆಗೆ ಒತ್ತು ನೀಡಿದ ಮೋದಿ ಅವರು, ದೇಶದ 140 ಕೋಟಿ ಜನರಿಗಾಗಿ 37 ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ವಿವರಿಸಿದರು.