HEALTH TIPS

ವಿಮಾನಗಳಿಗೆ ಬಾಂಬ್‌ ಬೆದರಿಕೆ: ವಾರದಲ್ಲಿ 100 ಹುಸಿ ಸಂದೇಶ

        ವದೆಹಲಿ:: ವಿಮಾನಯಾನ ಸಂಸ್ಥೆಗಳಿಗೆ ಏಳು ದಿನಗಳಲ್ಲಿ ಬಂದಿರುವ ಬಾಂಬ್‌ ಬೆದರಿಕೆ ಸಂದೇಶಗಳ ಸಂಖ್ಯೆ 100ಕ್ಕೆ ತಲುಪಿದ್ದು ಇವೆಲ್ಲವೂ ಹುಸಿ ಸಂದೇಶಗಳು ಎನ್ನುವುದು ಖಚಿತಪಟ್ಟಿದೆ. ಭಾನುವಾರ ಕೂಡ 20ರಿಂದ 30 ಹುಸಿ ಸಂದೇಶಗಳು ಇಂಡಿಗೊ, ಏರ್ ಇಂಡಿಯಾ, ವಿಸ್ತಾರಾ ಮತ್ತು ಆಕಾಸಾ ಏರ್‌ ಸಂಸ್ಥೆಗಳಿಗೆ ಬಂದಿದ್ದು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯಕ್ಕೆ ಕಾರಣವಾದವು.

          ಅಲ್ಲದೆ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ, ವಿಮಾನ ನಿಲ್ದಾಣದ ಇ-ಮೇಲ್‌ ಐಡಿಗೆ ಅಪರಿಚಿತರಿಂದ ಬೆದರಿಕೆಯ ಎರಡು ಸಂದೇಶಗಳು ಬಂದಿವೆ.

ಜಿದ್ದಾ-ಮುಂಬೈ, ಕೋಯಿಕ್ಕೋಡ್‌- ದಮ್ಮಾಮ್, ದೆಹಲಿ- ಇಸ್ತಾಂಬುಲ್, ಮುಂಬೈ-ಇಸ್ತಾಂಬುಲ್, ಪುಣೆ- ಜೋಧ್‌ಪುರ ಮತ್ತು ಗೋವಾದಿಂದ ಅಹಮದಾಬಾದ್‌ಗೆ ಹೊರಟಿದ್ದ ತನ್ನ ಆರು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎಂದು ಇಂಡಿಗೊ ಹೇಳಿಕೆಯಲ್ಲಿ ತಿಳಿಸಿದೆ.

            'ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯು ನಮ್ಮ ಆದ್ಯತೆಯಾಗಿದೆ. ಮಾರ್ಗಸೂಚಿ ಪ್ರಕಾರ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ' ಎಂದು ಅದು ಹೇಳಿದೆ.

           ವಿಸ್ತಾರಾದ ಆರು ವಿಮಾನಗಳಿಗೆ ಇದೇ ರೀತಿಯ ಸಂದೇಶಗಳು ಬಂದಿದ್ದು, ದೆಹಲಿ-ಫ್ರಾಂಕ್‌ಫರ್ಟ್, ಸಿಂಗಪುರ-ಮುಂಬೈ, ಬಾಲಿ-ದೆಹಲಿ, ಸಿಂಗಪುರ-ದೆಹಲಿ, ಸಿಂಗಪುರ-ಪುಣೆ ಮತ್ತು ಮುಂಬೈನಿಂದ ಸಿಂಗಪುರಕ್ಕೆ ಸಂಚರಿಸಬೇಕಿದ್ದ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಅಧಿಕಾರಿಗಳು ನೀಡಿರುವ ನಿರ್ದೇಶನದಂತೆ ಭದ್ರತಾ ಕಾರ್ಯವಿಧಾನಗಳನ್ನು ಕೈಗೊಳ್ಳಲಾಗಿದೆ ಎಂದು ವಿಸ್ತಾರಾ ಹೇಳಿದೆ.


       ಆಕಾಸಾ ಏರ್‌ ಸಂಸ್ಥೆಯ, ದೇಶದ ಪ್ರಮುಖ ನಗರಗಳ ನಡುವೆ ಸಂಚರಿಸುವ ಆರು ವಿಮಾನಗಳಿಗೆ ಇಂತಹದೇ ಸಂದೇಶಗಳು ಬಂದಿವೆ. 'ತುರ್ತು ಸ್ಪಂದನಾ ತಂಡಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿವೆ. ಭದ್ರತಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ' ಎಂದು ಆಕಾಸಾ ಏರ್‌ ತಿಳಿಸಿದೆ.

ಹುಸಿ ಸಂದೇಶಗಳ ಬಗ್ಗೆ ಮುಂಬೈ ಮತ್ತು ದೆಹಲಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಶದ ರಾಜಧಾನಿಯಲ್ಲಿ ದಾಖಲಾದ ಪ್ರಕರಣದ ತನಿಖೆಗಾಗಿ ದೆಹಲಿ ಪೊಲೀಸರ ವಿಶೇಷ ಘಟಕವನ್ನು ನಿಯೋಜಿಸಲಾಗಿದೆ. ಸುಳ್ಳು ಸಂದೇಶ ಕಳುಹಿಸುವವರನ್ನು 'ಹಾರಾಟ ನಿಷೇಧ' ('ನೋ - ಫ್ಲೈ') ಪಟ್ಟಿಗೆ ಸೇರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

          ಬೆಳಗಾವಿ: ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಅಧಿಕಾರಿಗಳು ಮತ್ತು ಪೊಲೀಸರು ಶ್ವಾನದಳ ಬಾಂಬ್ ನಿಷ್ಕ್ರಿಯ ದಳದವರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು.

‌'ವಿಮಾನ ನಿಲ್ದಾಣದ ಇ-ಮೇಲ್‌ ಐಡಿಗೆ ಅ. 18 ಮತ್ತು 19ರಂದು ಎರಡು ಬೆದರಿಕೆ ಮೇಲ್‌ ಬಂದಿವೆ. ಈ ಸಂಬಂಧ ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು ಇಡೀ ನಿಲ್ದಾಣದಲ್ಲಿ ಭದ್ರತೆ ಬಿಗಿಗೊಳಿಸಿದ್ದೇವೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ವಹಿಸಿದ್ದೇವೆ. ವೇಳಾಪಟ್ಟಿಗೆ ಅನುಗುಣವಾಗಿ ಎಲ್ಲ ವಿಮಾನಗಳೂ ಭಾನುವಾರ ಹಾರಾಟ ನಡೆಸಿವೆ' ಎಂದು ವಿಮಾನ ನಿಲ್ದಾಣ ನಿರ್ದೇಶಕ ಎಸ್‌.ತ್ಯಾಗರಾಜನ್‌ 'ಪ್ರಜಾವಾಣಿ'ಗೆ ತಿಳಿಸಿದರು.

'ಇಡೀ ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ತಪಾಸಣೆ ಮಾಡಲಾಗಿದೆ. ಆದರೆ ಬಾಂಬ್‌ ಇರುವ ಬಗ್ಗೆ ಯಾವುದೇ ಸುಳಿವೂ ಸಿಕ್ಕಿಲ್ಲ. ಇ-ಮೇಲ್‌ ಮೂಲಕ ಬೆದರಿಕೆ ಹಾಕಿದವರ ಪತ್ತೆಗೆ ತನಿಖೆ ನಡೆಸುತ್ತಿದ್ದೇವೆ' ಎಂದು ನಗರ ಪೊಲೀಸ್‌ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್‌ ಜಗದೀಶ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries