ಜೆರುಸಲೇಂ/ ಬಾಗ್ದಾದ್/ ಮಾಸ್ಕೊ: ಉತ್ತರ ಗಾಜಾದ ಆಸ್ಪತ್ರೆಯೊಂದರ ಮೇಲೆ ವಾರಾಂತ್ಯದಲ್ಲಿ ದಾಳಿ ನಡೆಸಿ, ಹಮಾಸ್‌ನ 100 ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಆದರೆ, ಬೀಟ್ ಲಾಹಿಯಾದಲ್ಲಿರುವ ಕಮಲ್ ಅಡ್ವಾನ್ ಆಸ್ಪತ್ರೆ ಮೇಲೆ ಶುಕ್ರವಾರ ದಾಳಿ ನಡೆಸಿದ ಇಸ್ರೇಲ್ ಪಡೆಗಳು ಆಸ್ಪತ್ರೆಯ 44 ಸಿಬ್ಬಂದಿಯನ್ನು ಬಂಧಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದು, ಹೆಚ್ಚಿನ ಹಾನಿಯಾಗಿದೆ ಎಂದು ಪ್ಯಾಲೆಸ್ಟೀನ್ ವೈದ್ಯಕೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರ್ಷದಿಂದ ನಡೆಯುತ್ತಿರುವ ಯುದ್ಧದ ಭಾಗವಾಗಿ ಇಸ್ರೇಲ್, ಗಾಜಾದಲ್ಲಿನ ಹಲವು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ. ಹಮಾಸ್ ಬಂಡುಕೋರರು ಮತ್ತು ಇತರ ಉಗ್ರರು ಅಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಪ್ಯಾಲೆಸ್ಟೀನ್ ವೈದ್ಯ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ತೈಲ ಬೆಲೆಯಲ್ಲಿ ಇಳಿಕೆ:
ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವಾರಾಂತ್ಯದಲ್ಲಿ ದಾಳಿ ನಡೆಸಿದ ಬಳಿಕ ಜಾಗತಿಕ ತೈಲ ಬೆಲೆಗಳಲ್ಲಿ ಸೋಮವಾರ ಕುಸಿತವಾಗಿದೆ. ಅಕ್ಟೋಬರ್ 2ರಂದು ಇಸ್ರೇಲ್ ಮೇಲೆ ಇರಾನ್ 200 ಕ್ಷಿಪಣಿಗಳನ್ನು ಹಾರಿಸಿದ ಬಳಿಕ ಜಾಗತಿಕವಾಗಿ ಕಚ್ಚಾ ಬೆಲೆಗಳು ಹೆಚ್ಚಾಗಿದ್ದವು.
ಇರಾನ್ ವಿಶ್ವದ ಏಳನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಆದರೆ ಸಂಘರ್ಷವು ಮಧ್ಯಪ್ರಾಚ್ಯದಾದ್ಯಂತ ವಿಸ್ತರಿಸಿದರೆ, ಅದು ವಿಶ್ದದ ದೊಡ್ಡ ತೈಲ ಉತ್ಪಾದಕರನ್ನೂ ಸೆಳೆಯಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕವು ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ.
ಅಮೆರಿಕ ಬೆಂಚ್‌ಮಾರ್ಕ್ ಮತ್ತು ಅಂತರರಾಷ್ಟ್ರೀಯ ಬ್ರೆಂಟ್ ಕಚ್ಚಾ ಬೆಲೆಯು ಸೋಮವಾರ ಶೇ 6ರಷ್ಟು ಕುಸಿದಿದೆ.
ವಿಶ್ವಸಂಸ್ಥೆಗೆ ಇರಾಕ್ ದೂರು:
ವಾರಾಂತ್ಯದಲ್ಲಿ ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಇರಾಕ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಭದ್ರತಾ ಮಂಡಳಿಗೆ ದೂರು ಸಲ್ಲಿಸಿದೆ. ಇಸ್ರೇಲ್‌ನ ವಿಮಾನಗಳು ಇರಾಕ್‌ನ ವಾಯುಪ್ರದೇಶ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸಿವೆ ಎಂದು ಅದು ದೂರಿದೆ.
ಇರಾನ್ ಮೇಲೆ ಇಸ್ರೇಲ್ ದಾಳಿಯ ಬಳಿಕ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಮಾಸ್ಕೊ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ತಿಳಿಸಿದ್ದಾರೆ.