ಕುಂಬಳೆ: ಕಳಿಯೂರು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢ ಶಾಲಾ ವಿಭಾಗದ ಗಣಿತ, ಸಮಾಜ ವಿಜ್ಞಾನ, ವಿಜ್ಞಾನ, ಹಾಗೂ ವೃತ್ತಿ ಶಿಕ್ಷಣ ವಿಭಾಗಗಳು ಅತ್ಯುನ್ನತ ಸಾಧನೆ ದಾಖಲಿಸಿದೆ.
ಗಣಿತ ಮೇಳದಲ್ಲಿ ಒಟ್ಟು ಹದಿನಾಲ್ಕು ಸ್ಪರ್ಧಾ ವಿಷಯಗಳಲ್ಲಿ, ಹನ್ನೊಂದು ಪ್ರಥಮ, ಎರಡು ದ್ವಿತೀಯ ಹಾಗೂ ಒಂದು ತೃತೀಯ ಸ್ಥಾನ ಪಡೆದು ಒಟ್ಟು 110 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಸಮಾಜ ವಿಜ್ಞಾನ ವಿಭಾಗದ ಆರು ಸ್ಪರ್ಧಾ ವಿಷಯಗಳಲ್ಲಿ ಒಂದು ಪ್ರಥಮ ಹಾಗೂ ಮೂರು ದ್ವಿತೀಯ ಸ್ಥಾನ ಪಡೆದು ಒಟ್ಟು 34 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನುಗಳಿಸಿದೆ. ವಿಜ್ಞಾನ ವಿಭಾಗದ ಒಟ್ಟು ಏಳು ಸ್ಪರ್ಧೆಗಳಲ್ಲಿ ಎರಡು ಪ್ರಥಮ ಬಹುಮಾನದೊಂದಿಗೆ 33 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಗಳಿಸಿದೆ. ವೃತ್ತಿ ಶಿಕ್ಷಣದಲ್ಲಿ ಭಾಗವಹಿಸಿದ ಇಪ್ಪತ್ತು ವಿಷಯಗಳಲ್ಲಿ ಎರಡು ಪ್ರಥಮ, ಐದು ದ್ವಿತೀಯ ಹಾಗೂ ಮೂರು ತೃತೀಯ ಸ್ಥಾನವನ್ನುಗಳಿಸಿ ಒಟ್ಟು 108 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಐಟಿ ಮೇಳದಲ್ಲಿ ಭಾಗವಹಿಸಿದ ನಾಲ್ಕು ವಿಷಯಗಳಲ್ಲಿ ಒಂದು ಪ್ರಥಮ ಸ್ಥಾನ ಗಳಿಸಿ ಒಟ್ಟು 18 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಶಾಲೆಯ ಈ ಸಾಧನೆಗೆ ಪೂರಕವಾಗಿನಿಂತ ವಿದ್ಯಾರ್ಥಿಗಳನ್ನು ಅಧ್ಯಾಪಕ ವೃಂದವನ್ನು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದಿಸಿದ್ದಾರೆ.