ಕೋಲ್ಕತ್ತ : 10 ವರ್ಷದ ಬಾಲಕಿಯೊಬ್ಬರ ಶವ 'ದಕ್ಷಿಣ 24 ಪರಗಣ' ಜಿಲ್ಲೆಯ ಜಯನಗರ ಪ್ರದೇಶದ ಹಳ್ಳಿಯೊಂದರ ನಿರ್ಜನ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.
ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಆಕೆ ಶುಕ್ರವಾರ ಸಂಜೆಯೇ ನಾಪತ್ತೆಯಾಗಿದ್ದಳು.
'ಬಾಲಕಿಯ ಶವವನ್ನು ಇಂದು (ಶನಿವಾರ) ಮಧ್ಯಾಹ್ನ ವಶಕ್ಕೆ ಪಡೆಯಲಾಗಿದೆ. ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಹೊರ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಠಾಣೆ ಎದುರು ನಿಲ್ಲಿಸಿದ್ದ ಹಲವು ವಾಹನಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ, ಪೊಲೀಸರು ಆವರಣದಿಂದ ಹೊರನಡೆದಿದ್ದರು. ನಂತರ, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
'ಬಾಲಕಿಯ ಕುಟುಂಬದವರು ಮಹಿಶ್ಮರಿ ಹೊರ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ' ಎಂದು ಸ್ಥಳೀಯರು ದೂರಿದ್ದಾರೆ. ಕೋಲ್ಕತ್ತದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾದ ನಂತರ ಹೇಗೆ ನಡೆದುಕೊಂಡಿದ್ದರೋ, ಅದೇ ರೀತಿ ಇಲ್ಲಿಯೂ ನಡೆದುಕೊಂಡರು ಎಂದು ಆರೋಪಿಸಿದ್ದಾರೆ.
'ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದವರಿಗೆ ಶಿಕ್ಷೆಯಾಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ದೂರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ, ಬಾಲಕಿಯನ್ನು ರಕ್ಷಿಸಬಹುದಿತ್ತು' ಎಂದು ಗಣೇಶ್ ದೊಲುಯ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಗ್ರಾಮಸ್ಥರ ಆರೋಪಗಳನ್ನು ಅಲ್ಲಗಳೆದಿರುವ ಪೊಲೀಸರು, ದೂರು ದಾಖಲಾಗುತ್ತಿದ್ದಂತೆ ಕ್ರಮ ಕೈಗೊಂಡಿದ್ದೆವು. ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
'ಶುಕ್ರವಾರ ರಾತ್ರಿ 9ಕ್ಕೆ ಎಫ್‌ಐಆರ್ ದಾಖಲಾಗಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದೆವು. ಪ್ರಾಥಮಿಕ ತನಿಖೆಯ ಭಾಗವಾಗಿ ಇಂದು ಬೆಳಿಗ್ಗೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ. ಮೃತ ಬಾಲಕಿಯ ಕುಟುಂಬದೊಂದಿಗೆ ನಾವಿದ್ದೇವೆ' ಎಂದಿದ್ದಾರೆ.
ಹಾಗೆಯೇ, 'ಪೊಲೀಸ್ ಹೊರಠಾಣೆಗೆ ಬೆಂಕಿ ಹಚ್ಚಿದ ಹಾಗೂ ಪ್ರಮುಖ ದಾಖಲೆಗಳನ್ನು ನಾಶ ಮಾಡಿದವರನ್ನೂ ಪತ್ತೆಹಚ್ಚಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.