ಕಣ್ಣೂರು: ಎಡಿಎಂ ನವೀನ್ ಬಾಬು ನಿಧನದ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾ ವಿರುದ್ಧ ಕಣ್ಣೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೀನ್ ಬಾಬು ಅವರ ಸಹೋದರ ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ದಿವ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ದಾಖಲಿಸಬಹುದು ಎಂದು ಪೋಲೀಸರು ಕಾನೂನು ಸಲಹೆ ಪಡೆದಿದ್ದರು. ದಿವ್ಯಾ ವಿರುದ್ಧ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪವಿದೆ.
ಕಣ್ಣೂರು ನಗರ ಪೋಲೀಸ್ ಆಯುಕ್ತ ಅಜಿತ್ ಕುಮಾರ್ ಪ್ರತಿಕ್ರಿಯಿಸಿ, ಈಗಾಗಲೇ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಹಲವು ದೂರುಗಳು ಬಂದಿದ್ದು, ದಿವ್ಯಾ ವಿರುದ್ಧ ತನಿಖೆ ನಡೆಯುತ್ತಿದೆ ಎಂದರು. ಸಂಬಂಧಿಕರ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ಇನ್ನಷ್ಟು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಅಗತ್ಯ ಬಿದ್ದರೆ ಪಿ.ಪಿ.ದಿವ್ಯಾ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ತನಿಖಾ ತಂಡ ನವೀನ್ ಬಾಬು ಅವರ ಸಹೋದ್ಯೋಗಿಗಳ ಹೇಳಿಕೆಯನ್ನು ಪಡೆದುಕೊಂಡಿದೆ. ನವೀನ್ ಬಾಬು ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ಬಹಳ ಸಂತೋಷದಿಂದ ಭಾಗವಹಿಸಿದ್ದರು ಮತ್ತು ಊರಿಗೆ ತೆರಳಲು ರೈಲು ಟಿಕೆಟ್ ಕಾಯ್ದಿರಿಸಿದ್ದರು ಎಂದು ಸಹೋದ್ಯೋಗಿಗಳು ಸಾಕ್ಷ್ಯ ನೀಡಿದ್ದಾರೆ. ದಿವ್ಯಾ ಅವರ ಆಕ್ಷೇಪಾರ್ಹ ಭಾಷಣದಿಂದ ನವೀನ್ ಮಾನಸಿಕ ತೊಂದರೆಗೆ ಒಳಗಾಗಿದ್ದರು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ಬೀಳ್ಕೊಡುಗೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳ ಹೇಳಿಕೆಯನ್ನೂ ಪೋಲೀಸರು ದಾಖಲಿಸಿಕೊಳ್ಳಲಿದ್ದಾರೆ. ಅಂತ್ಯಕ್ರಿಯೆ ಬಳಿಕ ಸಂಬಂಧಿಕರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಸಿಪಿಎಂ ಕೂಡ ದಿವ್ಯಾ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ನಿರ್ಧರಿಸಿದೆ. ಪತ್ತನಂತಿಟ್ಟ ಜಿಲ್ಲಾ ಸಮಿತಿಯ ತೀವ್ರ ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಣ್ಣೂರಿನ ಜಿಲ್ಲಾ ಮುಖಂಡರ ಒಂದು ವರ್ಗವೂ ದಿವ್ಯಾ ವಿರುದ್ಧ ಹರಿಹಾಯ್ದಿದೆ. ನವೀನ್ ಬಾಬು ಅಂತ್ಯಸಂಸ್ಕಾರದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ನಾಳೆ ಜಿಲ್ಲಾ ಸಮಿತಿ ಕಚೇರಿ ಹಾಗೂ ಜಿಲ್ಲಾ ಸಮಿತಿ ಸಭೆಯಲ್ಲಿ ದಿವ್ಯಾ ವಿರುದ್ಧ ತನಿಖೆ ನಡೆಸಲು ನಿರ್ಧರಿಸಲಾಗುವುದು.
ಇದೇ ವೇಳೆ ಇಂದು ನವೀನ್ ಬಾಬು ಅವರ ಅಂತ್ಯಕ್ರಿಯೆ ನಡೆಯಿತು. ಕಲೆಕ್ಟರೇಟ್‍ನಲ್ಲಿ ಸಾರ್ವಜನಿಕ ದರ್ಶನದ ನಂತರ ಮಲೆಯಾಳಪುಳದ ಪಾಟಿಸ್ಸೇರಿಯಲ್ಲಿರುವ ಕಾರುವಳ್ಳಿಯ ಮನೆಗೆ ತರಲಾದ ಮೃತದೇಹಕ್ಕೆ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನ 3:00 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.