ನವದೆಹಲಿ: ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲು ಬಳಕೆಯಾದ ಹಲವು ಸಾಮಾಜಿಕ ಮಾಧ್ಯಮಗಳ 10 ಖಾತೆಗಳನ್ನು ಸೈಬರ್ ಭದ್ರತಾ ಸಂಸ್ಥೆ ಗುರುವಾರ ಅಮಾನತು ಮಾಡಿದೆ.
ಪ್ರಕರಣವನ್ನು ಸೈಬರ್, ವಿಮಾನಯಾನ ಭದ್ರತೆ ಹಾಗೂ ಗುಪ್ತಚರ ಇಲಾಖೆ ಜಂಟಿಯಾಗಿ ತನಿಖೆ ನಡೆಸಿದ್ದವು.
ದೇಶೀಯ ಹಾಗೂ ವಿದೇಶಿ ಮಾರ್ಗಗಳ ವಿಮಾನಗಳಿಗೆ ಬೆದರಿಕೆ ಸಂದೇಶ ಕಳುಹಿಸಲು ಬಳಕೆಯಾದ ಬಹುತೇಕ ಖಾತೆಗಳು ಸಾಮಾಜಿಕ ಮಾಧ್ಯಮ ಎಕ್ಸ್‌ಗೆ ಸೇರಿದ್ದಾಗಿವೆ. ಹೀಗೆ ಕಳುಹಿಸಿದ್ದ ಸಂದೇಶಗಳಲ್ಲಿ 'ಬಾಂಬ್', 'ಎಲ್ಲೆಡೆ ರಕ್ತಪಾತವಾಗಲಿದೆ', 'ಸ್ಪೋಟಕ ಸಾಮಗ್ರಿ', 'ಇದು ಜೋಕ್ ಅಲ್ಲ', 'ನೀವೆಲ್ಲರೂ ಸಾಯುತ್ತೀರಿ' ಮತ್ತು 'ಬಾಂಬ್ ಇಡಲಾಗಿದೆ' ಎಂಬ ವಾಕ್ಯಗಳು ಸಾಮಾನ್ಯವಾಗಿ ಬಳಕೆಯಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಎಫ್‌ಐಆರ್ ದಾಖಲಿಸುವುದರ ಜತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ 'ಸೈಬರ್ ಗಸ್ತು' ನಡೆಸುವ ಹಾಗೂ ಡಾರ್ಕ್ ವೆಬ್ ಬಳಸಿ ಇಂಥ ಕೃತ್ಯಗಳ ಮೂಲ ಪತ್ತೆ ಹಚ್ಚುವ ಕೆಲಸವನ್ನು ಆರಂಭಿಸಲಾಗಿದೆ ಎಂದು ತನಿಖೆ ನಡೆಸಿದ ಸಂಸ್ಥೆಗಳು ಹೇಳಿವೆ.
ಬೆದರಿಕೆ ಸಂದೇಶ ಕಳುಹಿಸಿದ ಇ-ಮೇಲ್ ಎಲ್ಲಿ ನೋಂದಾಯಿಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಇವುಗಳಲ್ಲಿ ಕೆಲವು ವಿದೇಶಿ ನೆಲದಿಂದ ಕಳುಹಿಸಲಾಗಿದೆ. ಹುಸಿ ಬಾಂಬ್ ಬೆದರಿಕೆಯಿಂದಾಗಿ ವಿಮಾನಯಾನದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿದೆ. ವಿದೇಶಕ್ಕೆ ಪ್ರಯಾಣಿಸಿದ ವಿಮಾನಗಳಿಗೆ ಫ್ರಾನ್ಸ್‌ನ ರಾಯಲ್ ಏರ್ ಫೋರ್ಸ್, ಸಿಂಗಪೂರ ಹಾಗೂ ಕೆನಡಾದ ಫೈಟರ್ ಜೆಟ್‌ಗಳು ಮಾರ್ಗದಲ್ಲಿ ಭಾರತದ ವಿಮಾನಗಳಿಗೆ ಭದ್ರತೆ ಒದಗಿಸಿವೆ.
ಹಲವು ವಿಮಾನಗಳು ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದ್ದರು. ವಿಮಾನಯಾನ ಸಂಸ್ಥೆಗಳಿಗೆ ಸಾಕಷ್ಟು ನಷ್ಟವೂ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಛತ್ತೀಸಗಡದ 17 ವರ್ಷದ ಬಾಲಕನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಸಿ ಬಾಂಬ್ ಕರೆಯಿಂದ ಸೋಮವಾರದಿಂದ ದೇಶಿಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದ್ದ ಭಾರತದ 20 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು.
2 ವಿಮಾನಗಳಿಗೆ ಬಾಂಬ್ ಬೆದರಿಕೆ
ಸತತ ನಾಲ್ಕನೇ ದಿನವೂ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಮುಂದುವರಿದಿದ್ದು 'ವಿಸ್ತಾರಾ' ಇಂಡಿಗೋ ಸಂಸ್ಥೆಯ ತಲಾ ಒಂದು ವಿಮಾನಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಇಸ್ತಾಂಬುಲ್‌ನಿಂದ ಮುಂಬೈಗೆ ಬರುತ್ತಿದ್ದ 'ಇಂಡಿಗೋ' ವಿಮಾನಕ್ಕೆ ಬೆದರಿಕೆ ಒಡ್ಡಿದ ನಂತರ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು.
ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ತೆರಳುತ್ತಿದ್ದ 'ವಿಸ್ತಾರಾ' ಸಂಸ್ಥೆಯ ವಿಮಾನಕ್ಕೂ ಸಾಮಾಜಿಕ ಜಾಲತಾಣದ ಮುಖಾಂತರ ಬೆದರಿಕೆ ಹಾಕಿದ್ದರು. ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುತ್ತಿದ್ದಂತೆಯೇ ವಿಸ್ತೃತ ಪರಿಶೀಲನೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.