ಕೋಲ್ಕತ್ತ: ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣ ಕುರಿತು ಆರೋಪಪಟ್ಟಿ ಸಲ್ಲಿಸಿರುವ ಸಿಬಿಐ, ಆರೋಪಿ ವಿರುದ್ಧ 11 ಸಾಕ್ಷ್ಯಗಳನ್ನು ಉಲ್ಲೇಖಿಸಿದೆ.
'ಸಂಜಯ್ ರಾಯ್ ಈ ಪ್ರಕರಣದ ಏಕೈಕ ಆರೋಪಿ' ಎಂದಿರುವ ಸಿಬಿಐ, ಆತನ ರಕ್ತದ ಮಾದರಿಗಳು, ಡಿಎನ್‌ಎ ವರದಿಯೂ ಸೇರಿದಂತೆ ಇತರ ಸಾಕ್ಷ್ಯಗಳ ಕುರಿತು ಆರೋಪ ಪಟ್ಟಿಯಲ್ಲಿ ವಿವರಿಸಿದೆ.
ಕೋಲ್ಕತ್ತ ಪೊಲೀಸರು ಸಂಜಯ್ ರಾಯ್ ಅವರನ್ನು ಆಗಸ್ಟ್ 10ರಂದು ಬಂಧಿಸಿದ್ದಾರೆ.
ಸ್ಥಳೀಯ ನ್ಯಾಯಾಲಯಕ್ಕೆ ಸಿಬಿಐ ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದು, ಸಂತ್ರಸ್ತೆಯ ಹೆಸರನ್ನು ಇಂಗ್ಲಿಷ್ ವರ್ಣಮಾಲೆಯ 'ವಿ' ಎಂಬುದಾಗಿ ಉಲ್ಲೇಖಿಸಿದೆ.
ಆರೋಪಪಟ್ಟಿಯಲ್ಲಿನ ಉಲ್ಲೇಖಗಳು
ಸಂತ್ರಸ್ತೆಯ ದೇಹದಲ್ಲಿ ಆರೋಪಿಯ ಡಿಎನ್‌ಎ ಪತ್ತೆಯಾಗಿದೆ. ಸಂತ್ರಸ್ತೆಯ ಮೃತದೇಹದ ಪರೀಕ್ಷೆಯಿಂದ ಇದು ದೃಢಪಟ್ಟಿದೆ
ಆರೋಪಿಯ ಜೀನ್ಸ್ ಪ್ಯಾಂಟ್ ಹಾಗೂ ಪಾದರಕ್ಷೆಗಳ ಮೇಲೆ ಸಂತ್ರಸ್ತೆಯ ರಕ್ತದ ಕಲೆಗಳು ಕಂಡುಬಂದಿವೆ.
ಅಪರಾಧ ನಡೆದ ಸ್ಥಳದಲ್ಲಿ ಸಿಕ್ಕಿರುವ ಸಣ್ಣ ಕೂದಲುಗಳು ಆರೋಪಿ ಸಂಜಯ್ ರಾಯ್‌ನ ಕೂದಲಿನೊಂದಿಗೆ ಹೊಂದಿಕೆಯಾಗುತ್ತವೆ
ಸಿ.ಸಿ.ಟಿವಿಯಲ್ಲಿ ದಾಖಲಾದ ದೃಶ್ಯಗಳು ಹಾಗೂ ಆರೋಪಿಯ ಮೊಬೈಲ್ ಫೋನಿಗೆ ಸಂಬಂಧಿಸಿದ ಲೊಕೇಶನ್ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಅಪರಾಧ ನಡೆದ ದಿನ ಆರೋಪಿಯು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ 3ನೇ ಮಹಡಿಯಲ್ಲಿದ್ದ ಎಂಬುದು ಈ ದೃಶ್ಯಗಳಿಂದ ದೃಢಪಟ್ಟಿದೆ
ಸಂತ್ರಸ್ತೆಯು ಪ್ರತಿರೋಧ ಒಡ್ಡಿದ್ದನ್ನು/ತಪ್ಪಿಸಿಕೊಳ್ಳುವುದಕ್ಕಾಗಿ ಆತನೊಂದಿಗೆ ನಡೆಸಿದ ಸಂಘರ್ಷದ ವೇಳೆ ಆರೋಪಿಗೆ ಗಾಯಗಳಾಗಿವೆ
ಅಪರಾಧ ನಡೆದ ಸ್ಥಳದತ್ತ ತೆರಳುವಾಗ ಆರೋಪಿಯು ಬ್ಲೂಟೂತ್ ಇಯರ್‌ಫೋನ್ ಧರಿಸಿದ್ದ. ಆ ಸ್ಥಳದಿಂದ ನಿರ್ಗಮಿಸಿದ ವೇಳೆ ಆತನ ಕೊರಳಲ್ಲಿ ಬ್ಲೂಟೂತ್ ಇದ್ದಿರಲಿಲ್ಲ. ಇದನ್ನು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿಯಲ್ಲಿ ಹೇಳಲಾಗಿದೆ
ಸಂತ್ರಸ್ತೆಯ ಕನ್ಯಾಪೊರೆಗೆ ಗಾಯಗಳಾಗಿವೆ. ಇದು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಸಂತ್ರಸ್ತೆಯ ಮೊಲೆತೊಟ್ಟುಗಳಲ್ಲಿದ್ದ ಲಾಲಾರಸವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅದು ಆರೋಪಿ ಸಂಜಯ್ ರಾಯ್‌ದೇ ಎಂಬುದು ದೃಢಪಟ್ಟಿದೆ
ಮರಣೋತ್ತರ ಪರೀಕ್ಷೆ ವೇಳೆ ಸಂತ್ರಸ್ತೆಯ ದೇಹದಲ್ಲಿ ವಿಶೇಷವಾಗಿ ಕೀಲುಗಳಲ್ಲಿ ಬಿಗಿತ ಕಂಡುಬಂದಿತ್ತು. ಇದು ಪರೀಕ್ಷೆಗೂ 12-18 ಗಂಟೆ ಮೊದಲೇ ಮೃತಪಟ್ಟಿದ್ದಳು ಎಂಬುದನ್ನು ಹೇಳುತ್ತದೆ
ವೈದ್ಯ ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.