ಗಾಜಾ: ಗಾಜಾ ಮೇಲೆ ಇಸ್ರೇಲ್ ಮತ್ತೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಖಾನ್ ಯೂನಿಸ್‌ನಲ್ಲಿನ ಬಹುಮಹಡಿ ವಸತಿ ಕಟ್ಟಡಗಳ ಮೇಲೆ ಶುಕ್ರವಾರ ನಡೆದ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ ಕನಿಷ್ಠ 38 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.
ಮೃತಪಟ್ಟಿ 14 ಮಕ್ಕಳ ಪೈಕಿ 13 ಮಕ್ಕಳು ಒಂದೇ ಕುಟುಂಬದವರಾಗಿದ್ದು, ಇಸ್ರೇಲಿ ಕ್ಷಿಪಣಿಗಳಿಂದ ಹರಬಂದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ.
ಗಾಜಾ ಆರೋಗ್ಯ ಅಧಿಕಾರಿಗಳು ಈ ಸಾವುಗಳನ್ನು ಖಚಿತಪಡಿಸಿದ್ದು, ಹಮಾಸ್ ಅನ್ನು "ಪರಿಣಾಮಕಾರಿಯಾಗಿ ಕಿತ್ತುಹಾಕುವ" ತನ್ನ ಉದ್ದೇಶವನ್ನು ಇಸ್ರೇಲ್ ಸಾಧಿಸಿದೆ ಎಂದು ಅಮೆರಿಕದ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಹೇಳಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.
ಬ್ಲಿಂಕೆನ್ ಶುಕ್ರವಾರ ಲಂಡನ್‌ನಲ್ಲಿ ಅರಬ್ ನಾಯಕರನ್ನು ಭೇಟಿಯಾಗುವ ಕೆಲವೇ ಗಂಟೆಗಳ ಮುನ್ನ ಇಸ್ರೇಲ್ ಸೇನೆ, ಆಗ್ನೇಯ ಲೆಬನಾನ್‌ನಲ್ಲಿ ಪತ್ರಕರ್ತರು ತಂಗಿದ್ದ ಅತಿಥಿಗೃಹದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ಪತ್ರಕರ್ತರು ಸಾವನ್ನಪ್ಪಿದ್ದಾರೆ.
ದಾಳಿಗೂ ಮುನ್ನ ಇಸ್ರೇಲ್ ಸೇನೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಸುದ್ದಿ ಜಾಲತಾಣಗಳ ಪ್ರತಿನಿಧಿಗಳು ಮತ್ತು ಲೆಬನಾನಿನ ರಾಜಕಾರಣಿಗಳು ಇಸ್ರೇಲ್ ಯುದ್ಧ ಅಪರಾಧ ಎಸಗಿದೆ ಮತ್ತು ಉದ್ದೇಶಪೂರ್ವಕವಾಗಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರ.
"ಬಹಳ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದ ಪತ್ರಕರ್ತರ ಮೇಲೆ ಇಸ್ರೇಲ್ ದಾಳಿ ನಡೆಸಿದೆ" ಎಂದು ಅಲ್ ಜಜೀರಾ ಇಂಗ್ಲಿಷ್ ಮಾಧ್ಯಮದ ಹಿರಿಯ ವರದಿಗಾರ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.