ಕಾಸರಗೋಡು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ತಂಡವೊಂದು ಪ್ರಯಾಣಿಕನ ಜೆಬಿಂದ 14500ರೂ. ನಗದು ಕಸಿದು ತೆಗೆದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಧೂರು ಪರಕ್ಕಿಲದ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ಉದಯ ಕುಮಾರ್ ಪಿ.ಪಿ(62)ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಅ. 12ರಂದು ಘಟನೆ ನಡೆದಿದ್ದು, ನಿಲ್ದಾಣದಲ್ಲಿ ನಿಂತಿದ್ದ ತನ್ನ ಬಳಿ ಬಂದ ಒಬ್ಬಾತ ಕೈಯಲ್ಲಿದ್ದ ಮೊಬೈಲ್ ಕಸಿದು ತೆಗೆದು, ಇದನ್ನು ಹಿಂತಿರುಗಿಸಬೇಕಾದರೆ 500ರೂ. ನೀಡುವಂತೆ ಬೇಡಿಕೆಯಿರಿಸಿದ್ದಾನೆ. ಅಲ್ಪ ಹೊತ್ತಿನಲ್ಲಿ ಈತನ ಸಹಚರ ಸನಿಹ ಆಗಮಿಸಿ ನನ್ನ ಜೇಬಲ್ಲಿದ್ದ 14500ರೂ. ನಗದು ಕಸಿದು ಬಲಪ್ರಯೋಗಿಸಿ ದೂಡಿಹಾಕಿ ಅಲ್ಲಿಂದ ಕಾಲ್ಕಿತ್ತಿರುವುದಾಗಿ ಉದಯ್‍ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.