ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇದೇ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ನಡೆಯುವ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸುವುದು ಭೇಟಿಯ ಉದ್ದೇಶ.
ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಟಿಸಿದರು.
ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು 2015ರ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಇದಾದ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ.
'ವಿದೇಶಾಂಗ ಸಚಿವರು ಭಾರತದ ನಿಯೋಗದ ನೇತೃತ್ವ ವಹಿಸುವರು. ಎಸ್‌ಸಿಒ ಶೃಂಗಸಭೆಗಾಗಿ ಮಾತ್ರ ಈ ಭೇಟಿ ನಿಗದಿಯಾಗಿದೆ' ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು.
ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪಾಕ್ ಸರ್ಕಾರವು ಪ್ರಧಾನಿ ಮೋದಿ ಅವರಿಗೆ ಕಳೆದ ಆಗಸ್ಟ್‌ನಲ್ಲಿ ಆಹ್ವಾನ ನೀಡಿತ್ತು. ಪ್ರಾದೇಶಿಕ ಭದ್ರತೆ, ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಎಸ್‌ಸಿಒ ಶೃಂಗಸಭೆಯಲ್ಲಿ ಭಾರತದ ಬದ್ಧತೆಯನ್ನು ವ್ಯಕ್ತಪಡಿಸಲು ಹಿರಿಯ ಸಚಿವರೇ ಭಾಗಿಯಾಗುತ್ತಿದ್ದಾರೆ ಎಂದು ಜೈಶಂಕರ್ ಅವರ ಉದ್ದೇಶಿತ ಭೇಟಿಯನ್ನು ವಿಶ್ಲೇಷಿಸಲಾಗಿದೆ.
ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಜಕ್‌ಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ ಎಸ್‌ಸಿಒ ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ. ಕಳೆದ ವರ್ಷ ಶೃಂಗಸಭೆಯು ಭಾರತದ ನೇತೃತ್ವದಲ್ಲಿ ವರ್ಚುವಲ್ ವೇದಿಕೆಯ ಮೂಲಕ ನಡೆದಿತ್ತು.