ಉಪ್ಪಳ : ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಅಟ್ಟೆಗೋಳಿಯಲ್ಲಿ ತಂಡವೊಂದು ಮೀನುಸಾಗಾಟದ ಲಾರಿ ತಡೆದು ಚಾಲಕಗೆ ಚಾಕು ತೋರಿಸಿ 1.64ಲಕ್ಷ ರೂ. ದರೋಡೆ ನಡೆಸಿದೆ. ಪೈವಳಿಕೆ ನಿವಾಸಿ ಯೂಸುಫ್ ದರೋಡೆಗೊಳಗಾದವರು. ಎಂದಿನಂತೆ ಬುಧವಾರ ನಸುಕಿಗೆ ಯೂಸುಫ್ ಲಾರಿಯಲ್ಲಿ ಮಂಗಳೂರಿಗೆ ಮೀನು ತರಲು ತೆರಳುವ ಹಾದಿಮಧ್ಯೆ ಅಟ್ಟೆಗೋಳಿಯಲ್ಲಿ ಇಬ್ಬರ ತಂಡ ಲಾರಿ ತಡೆದು ನಿಲ್ಲಿಸಿದೆ. ಲಾರಿಯನ್ನೇರಿದ ತಂಡ ಯೂಸುಫ್ ಅವರ ಕತ್ತಿಗೆ ಚಾಕು ಇರಿಸಿ ಹಣ ನೀಡುವಂತೆ ಬೆದರಿಕೆಯೊಡ್ಡಿದೆ. ಯೂಸುಫ್ ಅವರಿಗೆ ಥಳಿಸಿದ ತಂಡ, ಕತ್ತು ಸೀಳುವುದಾಗಿ ಬೆದರಿಕೆಯೊಡ್ಡಿದಾಗ ಮೀನು ಖರೀದಿಗಾಗಿ ತೆಗೆದಿರಿಸಿದ್ದ 1.64 ರೂ. ಮೊತ್ತವನ್ನು ನೀಡಬೇಕಾಗಿ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದಾರೆ. ಹಣ ಕೈಗೆ ಸಿಗುತ್ತಿದ್ದಂತೆ ತಂಡ ಬೈಕಲ್ಲಿ ಪರಾರಿಯಾಗಿದೆ. ಈ ಬಗ್ಗೆ ಯೂಸುಫ್ ಅವರು ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ಆರಂಭಿಸಿದ್ದಾರೆ.