ಮುಂಬೈ: ಅಗತ್ಯ ಪ್ರಮಾಣದಲ್ಲಿ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಬ್ಯಾಂಕ್ ನೌಕರರು ನವೆಂಬರ್ 16ರಂದು ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ನೌಕರರ ಈ ಕ್ರಮವು ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇದೆ.
ಮುಂಬೈ: ಅಗತ್ಯ ಪ್ರಮಾಣದಲ್ಲಿ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಬ್ಯಾಂಕ್ ನೌಕರರು ನವೆಂಬರ್ 16ರಂದು ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ನೌಕರರ ಈ ಕ್ರಮವು ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಲಡ್ಕಿ ಬಹೀಣ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಇರುವ ಕಾರಣ, ಬ್ಯಾಂಕ್ ನೌಕರರು ಭದ್ರತೆಯನ್ನು ಕೇಳುತ್ತಿದ್ದಾರೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು), ಮುಷ್ಕರದ ತೀರ್ಮಾನ ಕೈಗೊಂಡಿದೆ.
'ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಯಾಗಿರುವ ಲಡ್ಕಿ ಬಹೀಣ್ ಯೋಜನೆಯ ಅನುಷ್ಠಾನದಲ್ಲಿ ಸರ್ಕಾರ ಹಾಗೂ ಬ್ಯಾಂಕ್‌ಗಳ ನಡುವೆ ಸಮನ್ವಯದ ಕೊರತೆ ಹಾಗೂ ಸಿದ್ಧತೆಗಳ ಕೊರತೆಯ ಕಾರಣದಿಂದಾಗಿ ಬ್ಯಾಂಕ್‌ಗಳ ಶಾಖೆಗಳಲ್ಲಿ ಗೊಂದಲಗಳು ಸೃಷ್ಟಿಯಾಗಿವೆ' ಎಂದು ಯುಎಫ್‌ಬಿಯು (ಮಹಾರಾಷ್ಟ್ರ ರಾಜ್ಯ) ಸಂಚಾಲಕ ದೇವಿದಾಸ್ ತುಳಜಾಪುರಕರ್ ಅವರು ಹೇಳಿದ್ದಾರೆ.
'ಹೊಸ ಖಾತೆಗಳನ್ನು ಆರಂಭಿಸಲು, ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಿಸಲು ಮತ್ತು ನಿಷ್ಕ್ರಿಯವಾಗಿರುವ ಖಾತೆಗಳನ್ನು ಸಕ್ರಿಯಗೊಳಿಸಲು ಬ್ಯಾಂಕ್ ಶಾಖೆಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲವು ಖಾತೆಗಳಿಂದ ಸೇವಾ ಶುಲ್ಕ ಪಡೆಯಬೇಕಿತ್ತು. ಆದರೆ, ಖಾತೆಗಳಲ್ಲಿ ಅಗತ್ಯ ಹಣ ಇಲ್ಲದಿದ್ದ ಕಾರಣ, ಹಣ ಕಡಿತ ಮಾಡಲು ಆಗುತ್ತಿರಲಿಲ್ಲ. ಈಗ ಯೋಜನೆಯ ಹಣವು ಖಾತೆಗೆ ಜಮಾ ಆದ ತಕ್ಷಣ, ಆ ಮೊತ್ತದಿಂದ ಸೇವಾ ಶುಲ್ಕವನ್ನು ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಕೆಲವು ಖಾತೆದಾರರಿಗೆ ಕಿರಿಕಿರಿ ಆಗುತ್ತಿದೆ. ಬ್ಯಾಂಕ್ ಶಾಖೆಗಳಲ್ಲಿ ಜಗಳ ಉಂಟಾಗುತ್ತಿದೆ' ಎಂದು ತುಳಜಾಪುರಕರ್ ಅವರು ಹೇಳಿದ್ದಾರೆ.
ಪರಿಸ್ಥಿತಿಯ ಲಾಭ ಪಡೆದು ಕೆಲವರು, ಫಲಾನುಭವಿಗಳ ನಡುವೆ ಜನಪ್ರಿಯತೆ ಪಡೆದುಕೊಳ್ಳಲು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸುವ ಹಾಗೂ ಅವರ ಮೇಲೆ ಹಲ್ಲೆ ನಡೆಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ಹಲವು ನಡೆದಿವೆ ಎಂದು ದೂರಿದ್ದಾರೆ. ಹೀಗಾಗಿ ಬ್ಯಾಂಕ್ ಸಿಬ್ಬಂದಿಗೆ ಹಾಗೂ ಬ್ಯಾಂಕ್ ಆಸ್ತಿಗಳಿಗೆ ಸೂಕ್ತ ಭದ್ರತೆಗೆ ಆಗ್ರಹಿಸಿ ಒಂದು ದಿನದ ಮುಷ್ಕರ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.