ನವದೆಹಲಿ: ಮಣಿಪುರದಲ್ಲಿ ಬುಡಕಟ್ಟು ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಮುದಾಯಗಳ ನಡುವೆ 17 ತಿಂಗಳ ಹಿಂದೆ ಆರಂಭಗೊಂಡ ಗಲಭೆ ಈಗ ತಹಬದಿಗೆ ಬಂದಿದ್ದರೂ, ರಾಜ್ಯ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮೈತೇಯಿ, ಕುಕಿ ಹಾಗೂ ನಾಗಾ ಸಮುದಾಯಗಳಿಗೆ ಸೇರಿದ ಶಾಸಕರು ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಿದ್ದಾರೆ.
ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವಿನ ವೈಮನಸ್ಸು ದೂರವಾಗಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಕರೆದಿರುವ ಸಭೆಯಲ್ಲಿ ಮಣಿಪುರ ವಿಧಾನಸಭಾಧ್ಯಕ್ಷ ಥೊಕ್ಚೊಮ್ ಸತ್ಯಬ್ರತಾ ಸಿಂಗ್, ತೊಂಗ್‌ಬ್ರಾಮ್ ರೊಬಿಂದ್ರೊ, ಬಸಂತ್‌ಕುಮಾರ್ ಸಿಂಗ್, ಕುಕಿ ಸಮುದಾಯಕ್ಕೆ ಸೇರಿದ ಲೆಟ್ಪಾವ್ ಹೊಕಿಪ್ ಹಾಗೂ ನೇಮ್ಚಾ ಕಿಪ್ಗೆನ್ (ಇಬ್ಬರೂ ಸಚಿವರು) ಪಾಲ್ಗೊಂಡಿದ್ದರು. ನಾಗಾ ಸಮುದಾಯದಿಂದ ಶಾಸಕರಾದ ರಾಮ್ ಮುಯಿವಾ, ಅವಾಂಗ್‌ಬೊ ನ್ಯೂಮಾಯಿ ಹಾಗೂ ಎಲ್. ಡಿಖೊ ಭಾಗಿಯಾಗಿದ್ದರು.
ಗೃಹ ಸಚಿವಾಲಯದ ಎ.ಕೆ. ಮಿಶ್ರಾ ಹಾಗೂ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ಮೈತೇಯಿ ಹಾಗೂ ಕೂಕಿ ಸಮುದಾಯಗಳ ನಡುವೆ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸುವುದು ಅಗತ್ಯ ಎಂದು ಗೃಹ ಸಚಿವ ಅಮಿತ್ ಶಾ ಅವರು ಜೂನ್ 17ರಂದು ಹೇಳಿದ್ದರು. ಇದಾದ ನಂತರ, ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಗೃಹ ಇಲಾಖೆ, 'ಎರಡೂ ಸಮುದಾಯಗಳ ಗುಂಪುಗಳೊಂದಿಗೆ ಮಾತುಕತೆ ನಡೆಸಲಾಗುವುದು. ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಒತ್ತು ನೀಡಲಾಗುವುದು' ಎಂದಿತ್ತು.
ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಏಳು ಶಾಸಕರನ್ನೂ ಒಳಗೊಂಡು 10 ಕುಕಿ ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಕುಕಿ ಸಮುದಾಯವು ಪ್ರತ್ಯೇಕ ಆಡಳಿತ ಅಥವಾ ಮಣಿಪುರದಲ್ಲಿ ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ಹೇಳಿವೆ.
ಮೈತೇಯಿ ಸಮುದಾಯವು ತಮಗೂ ಪರಿಶಿಷ್ಟ ವರ್ಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 2023ರ ಮೇ 3ರಂದು ಆದಿವಾಸಿಗಳ ಘನತೆಯ ನಡಿಗೆ ಆಯೋಜನೆಗೊಂಡ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಕೆಲವೇ ದಿನಗಳಲ್ಲಿ ಇದು ರಾಜ್ಯದೆಲ್ಲೆಡೆ ವ್ಯಾಪಿಸಿತು. ಈ ಹಿಂಸಾಚಾರದಲ್ಲಿ 220ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಹಲವರು ನಿರ್ವಸತಿಗರಾದರು. ಕೆಲ ಭದ್ರತಾ ಸಿಬ್ಬಂದಿಯೂ ನಿಧನರಾದರು.