ಅಹಮದಾಬಾದ್: ದೇಶದಾದ್ಯಂತ ಹಬ್ಬಿರುವ ಶಂಕಿತ 'ಡಿಜಿಟಲ್ ಅರೆಸ್ಟ್' ಜಾಲಕ್ಕೆ ಸಂಬಂಧಿಸಿ ತೈವಾನ್ ಮೂಲದ ನಾಲ್ವರು ಸೇರಿದಂತೆ 17 ಜನರನ್ನು ಅಹಮದಾಬಾದ್ ಸೈಬರ್ ಅಪರಾಧ ವಿಭಾಗವು ಬಂಧಿಸಿದೆ.
ಮಾದಕ ವಸ್ತು ವಹಿವಾಟು, ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಯ ಹೆಸರಿನಲ್ಲಿ ವಂಚನೆ ಎಸಗುವ ಮೂಲಕ 'ಡಿಜಿಟಲ್ ಅರೆಸ್ಟ್' ಜಾಲವು ಸಕ್ರಿಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾದ ಕಾರಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
'ನಿಮ್ಮ ವಿರುದ್ಧ ಆರ್‌ಬಿಐಗೆ ವಂಚನೆ ಎಸಗಿದ ಪ್ರಕರಣ ದಾಖಲಾಗಿದೆ ಎಂದು ಆರೋಪಿಗಳು ಹಿರಿಯ ನಾಗರಿಕರೊಬ್ಬರನ್ನು ನಂಬಿಸಿದ್ದರು. 10 ದಿನ ವಿಡಿಯೊ ಕರೆಗಳ ಮೂಲಕ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ₹79.34 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ದೂರ ಸಂಪರ್ಕ ನಿಯಂಂತ್ರಣ ಪ್ರಾಧಿಕಾರ(ಟ್ರಾಯ್), ಸಿಬಿಐ ಮತ್ತು ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಕೆಲವರು ನಿಮ್ಮ ಖಾತೆಯು ಹಣ ಅಕ್ರಮ ವರ್ಗಾವಣೆಗೆ ಬಳಕೆಯಾಗಿದೆ ಎಂದು ಆತಂಕ್ಕೆ ಈಡುಮಾಡಿದ್ದರು' ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ದೂರಿನ ಆಧಾರದಲ್ಲಿ ಗುಜರಾತ್, ದೆಹಲಿ, ರಾಜಸ್ಥಾನ, ಕರ್ನಾಟಕ, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ತನಿಖೆ ನಡೆಸಿದ ನಮ್ಮ ತಂಡವು 17 ಜನರನ್ನು ಬಂಧಿಸಿದೆ. ಅವರು ಈವರೆಗೆ ಒಂದು ಸಾವಿರ ಜನರಿಗೆ ವಂಚಿಸಿರುವ ಸಾಧ್ಯತೆಗಳಿವೆ' ಎಂದು ಪೊಲೀಸರು ತಿಳಿಸಿದ್ದಾರೆ.
ತೈವಾನ್‌ನ ನಾಲ್ವರು ಬಂಧಿತರು ಒಂದು ವರ್ಷದ ಹಿಂದೆ ಭಾರತಕ್ಕೆ ಆಗಮಿಸಿದ್ದರು, ಸಂತ್ರಸ್ತರ ಖಾತೆಯಿಂದ ಹಣ ವರ್ಗಾಯಿಸಲು ಅಗತ್ಯವಾದ ಆಯಪ್ ಮತ್ತು ತಾಂತ್ರಿಕ ನೆರವನ್ನು ಅವರು ನೀಡುತ್ತಿದ್ದರು. ಸಂತ್ರಸ್ತರಿಂದ ಪಡೆದ ಹಣವನ್ನು ದುಬೈನಲ್ಲಿರುವ ಕ್ರಿಪ್ಟೋ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.
'₹12.75 ಲಕ್ಷ ನಗದು, 761 ಸಿಮ್ ಕಾರ್ಡ್, 120 ಮೊಬೈಲ್ ಫೋನ್, 96 ಚೆಕ್ ಪುಸ್ತಕ, 92 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಾಗೂ 42 ಬ್ಯಾಂಕ್ ಖಾತೆ ಪುಸ್ತಕಗಳನ್ನು ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಕಾಲ್‌ಸೆಂಟರ್ ಮೂಲಕ ಈ ಜಾಲವನ್ನು ನಡೆಸುತ್ತಿದ್ದ ಆರೋಪಿಗಳು ತನಿಖಾ ಸಂಸ್ಥೆಯ ಕಚೇರಿಗಳನ್ನು ಹೋಲುವ ಕೊಠಡಿಯನ್ನು ನಿರ್ಮಿಸಿಕೊಂಡಿದ್ದರು' ಎಂದು ಹೇಳಿದ್ದಾರೆ.