ಈ ಹಿಂದೆ ಅಂದರೆ, ಸುಮಾರು 200 ಮಿಲಿಯನ್ ವರ್ಷಗಳ ಹಿಂದೆ, ಭೂಮಿಯ ಸಂಪೂರ್ಣ ಭೂಪ್ರದೇಶವನ್ನು ಆವರಿಸಿದ್ದ ಪಾಂಗಿಯಾ ಎಂಬ ಮಹಾ ಖಂಡವು ವಿವಿಧ ಖಂಡಗಳಾಗಿ ವಿಭಜನೆಯಾಯಿತು ಮತ್ತು ಕಾಲಾನಂತರದಲ್ಲಿ ಖಂಡಗಳು ದೂರ ಸರಿಯಿತು. ಇದನ್ನೇ ಖಂಡಗಳ ಚಲನೆ ಎಂದು ಕರೆಯುತ್ತಾರೆ.
ಭೂ ಅಂತರಾಳದಲ್ಲಿ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯು ಸಾಮಾನ್ಯವಾಗಿ ಭೂಮಿಯ ಭೂಪ್ರದೇಶದಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಸದ್ಯ ಭೂಮಿಯ ಮೇಲಿನ ಎರಡನೇ ಅತಿ ದೊಡ್ಡ ಖಂಡವಾದ ಆಫ್ರಿಕಾ ಎರಡು ಭಾಗವಾಗಲಿದೆ ಎಂದು ವಿಜ್ಞಾನ ಜಗತ್ತು ಇದೀಗ ಕಂಡುಕೊಂಡಿದೆ. ಲೈವ್ ಸೈನ್ಸ್ ಪ್ರಕಾರ ಈಸ್ಟ್ ಆಫ್ರಿಕನ್ ರಿಫ್ಟ್ ಸಿಸ್ಟಮ್ (EARS) ನಲ್ಲಿ ಬಿರುಕು ಕಂಡುಬಂದಿದೆ.
ಆಫ್ರಿಕಾವು ವಿಶ್ವದಲ್ಲೇ ಅತಿದೊಡ್ಡ ಬಿರುಕುಗಳಿಗೆ ನೆಲೆಯಾಗಿದೆ. ಪೂರ್ವ ಆಫ್ರಿಕಾದ ರಿಫ್ಟ್ ಸಿಸ್ಟಮ್ (EARS) ತುಂಬಾ ದೊಡ್ಡದಾಗಿದೆ. ಇದು ಇಥಿಯೋಪಿಯಾ, ಕೀನ್ಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ, ತಾಂಜಾನಿಯಾ, ಮಲಾವಿ ಮತ್ತು ಮೊಜಾಂಬಿಕ್ ಸೇರಿದಂತೆ ಹಲವಾರು ದೇಶಗಳ ಮೂಲಕ ಹಾದುಹೋಗುತ್ತದೆ.
ಅಂದಹಾಗೆ ಈ ಪ್ರದೇಶದಲ್ಲಿ ಬಿರುಕು ಮೂಡಿದ್ದು, ಅದು ದೊಡ್ಡದಾಗುತ್ತಿದೆ. ಸಣ್ಣ ಸೊಮಾಲಿಯನ್ ಪ್ಲೇಟ್ ಅನ್ನು ದೊಡ್ಡ ನುಬಿಯನ್ ಪ್ಲೇಟ್‌ನಿಂದ ಇದು ಪ್ರತ್ಯೇಕಿಸುತ್ತದೆ. ಇದೇನು ತ್ವರಿತ ಪ್ರಕ್ರಿಯೆಯಲ್ಲ, ಈ ಬಿರುಕು ಅಭಿವೃದ್ಧಿಗೊಳ್ಳಲು 25 ಮಿಲಿಯನ್ ವರ್ಷಗಳನ್ನು ತೆಗೆದುಕೊಂಡಿದೆ. ಅಂದಿನಿಂದ ಈ ಬಿರುಕು ದೊಡ್ಡದಾಗುತ್ತಲೇ ಇದೆ. ಭವಿಷ್ಯದಲ್ಲಿ ಇದರಿಂದ ಹೊಸ ಆರನೇ ಮಹಾಸಾಗರವು ರೂಪುಗೊಳ್ಳುತ್ತದೆ. ಪ್ರಸ್ತುತ ವಿಶ್ವದಲ್ಲಿ ಐದು ಮಹಾಸಾಗರಳಿವೆ ಅವುಗಳೆಂದರೆ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ, ದಕ್ಷಿಣ ಹಾಗೂ ಅರ್ಕ್ಟಿಕ್ ಮಹಾಸಾಗರ. ಇದರ ಪರಿಣಾಮವಾಗಿ ರುವಾಂಡಾ, ಉಗಾಂಡಾ, ಬುರುಂಡಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಮಲಾವಿ ಮತ್ತು ಜಾಂಬಿಯಾ ದೇಶಗಳು ಕರಾವಳಿ ಪ್ರದೇಶವನ್ನು ಪಡೆಯುತ್ತವೆ.
ಬಿಬಿಸಿ ಸೈನ್ಸ್ ಫೋಕಸ್ ಪ್ರಕಾರ, 2018ರ ಮಾರ್ಚ್ ತಿಂಗಳಲ್ಲೇ ನೈಋತ್ಯ ಕೀನ್ಯಾದಲ್ಲಿ ನೆಲದ ಮೂಲಕ ಸೀಳಿ ಹೋದಂತಹ ಬಿರುಕು ಮೊದಲ ಬಾರಿ ಗಮನಕ್ಕೆ ಬಂದಿತು. ಆ ಬಳಿಕ ಇಲ್ಲಿಯೇ ಅಧ್ಯಯನ ನಡೆಯುತ್ತಿದೆ. ಜ್ವಾಲಾಮುಖಿ ಬೂದಿಯಿಂದ ಆವರಿಸಿದ ಈ ಪ್ರದೇಶವು ಭಾರೀ ಮಳೆಯನ್ನು ಅನುಭವಿಸಿದ ಕಾರಣ ಮತ್ತು ಅದರ ಮೂಲಕ ನೀರು ನೀರು ಹರಿದ ಕಾರಣ ಬೂದಿಯ ಪದರವು ಸವೆದುಹೋಗಿದ್ದರಿಂದ ಇದನ್ನು ಹಲವು ವರ್ಷಗಳಿಂದ ಗುರುತಿಸಲಾಗಿಲ್ಲ. ದೊಡ್ಡ ಬಿರುಕು ನಂತರ ನೈರೋಬಿ ಹೆದ್ದಾರಿಯ ಭಾಗವನ್ನೇ ನುಂಗಿ ಹಾಕಿತು.
ಪೂರ್ವ ಆಫ್ರಿಕಾದ ಬಿರುಕು ಸುಮಾರು 35 ಮಿಲಿಯನ್ ವರ್ಷಗಳ ಹಿಂದೆ ಅರೇಬಿಯಾ ಮತ್ತು ಆಫ್ರಿಕಾದ ನಡುವಿನ ಖಂಡದ ಪೂರ್ವ ಭಾಗದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿತು. ಸುಮಾರು 25 ದಶಲಕ್ಷ ವರ್ಷಗಳ ಹಿಂದೆ, ಬಿರುಕು ದಕ್ಷಿಣದ ಕಡೆಗೆ ವಿಸ್ತರಿಸಿತು ಮತ್ತು ಉತ್ತರ ಕೀನ್ಯಾವನ್ನು ಬೇರ್ಪಡಿಸಲು ಪ್ರಾರಂಭಿಸಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬಸಾಲ್ಟ್‌ಗಳು ಎಂದು ಕರೆಯಲ್ಪಡುವ ಬೃಹತ್ ಜ್ವಾಲಾಮುಖಿ ಸ್ಫೋಟಗಳು ಬಿರುಕು ಉಂಟಾಗಲು ಕಾರಣ ಎನ್ನಲಾಗಿದೆ. ಇನ್ನೊಂದು ಕಾರಣವೆಂದರೆ ಮಣ್ಣಿನ ಸವೆತ. ಭೂವಿಜ್ಞಾನಿಗಳು ಈ ಬಿರುಕು ಮಣ್ಣಿನ ಸವೆತದಿಂದ ಉಂಟಾಗಿದೆ ಎಂದು ನಂಬುತ್ತಾರೆ. ಆದಾಗ್ಯೂ ನಿರ್ದಿಷ್ಟ ಸ್ಥಳದಲ್ಲಿ ಅದರ ರಚನೆಯ ಬಗ್ಗೆ ಅನೇಕ ಪ್ರಶ್ನೆಗಳು ಉಳಿದಿವೆ. ಅದರ ಆಕಾರಕ್ಕೂ ಪೂರ್ವ ಆಫ್ರಿಕಾದ ಬಿರುಕುಗೂ ಏನಾದರೂ ಸಂಬಂಧವಿದೆಯೇ ಎಂದು ಕಂಡುಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆಫ್ರಿಕಾ ಇಬ್ಭಾಗವಾಗಲಿದೆ ಎಂದು ಹೇಳಿದ ಮಾತ್ರಕ್ಕೆ ಭಯಪಡುವ ಅಗತ್ಯವಿಲ್ಲ ಎನ್ನುತ್ತದೆ ವಿಜ್ಞಾನ ಜಗತ್ತು.