ನವದೆಹಲಿ: ಮಧ್ಯಪ್ರದೇಶದ ಬಾಂಧವಗಢ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಲ್ಲಿ ಒಟ್ಟು ಏಳು ಆನೆಗಳು ಮೃತಪಟ್ಟಿವೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.
'ಮೀಸಲು ಅರಣ್ಯದಲ್ಲಿ ಬುಧವಾರ ಮೂರು ಆನೆಗಳು ಸತ್ತಿವೆ. ಮೃತಪಟ್ಟ ಆನೆಗಳ ಸಂಖ್ಯೆ ಏಳಕ್ಕೇರಿದೆ. ಇನ್ನೂ ಮೂರು ಆನೆಗಳ ಸ್ಥಿತಿ ಗಂಭೀರವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆದೇಶ: ಆನೆಗಳ ಸಾವು ಪ್ರಕರಣ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಧ್ಯಪ್ರದೇಶದ ಅರಣ್ಯ ಸಚಿವ ರಾಮನಿವಾಸ್ ರಾವತ್ ತಿಳಿಸಿದ್ದಾರೆ.
ಬಾಂಧವಗಢ ಮೀಸಲು ಅರಣ್ಯ ವಲಯದ ನಿರ್ದೇಶಕ ಪ್ರಕಾಶ್ ಕುಮಾರ್ ವರ್ಮಾ ಅವರು, 'ಮೇಲ್ನೋಟಕ್ಕೆ ಆನೆಗಳು 'ಕೊಡೊ' ಧಾನ್ಯ (ಸಿರಿಧಾನ್ಯ) ತಿಂದು ಸತ್ತಿರುವಂತಿದೆ. ಮರಣೋತ್ತರ ಪರೀಕ್ಷೆ ನಂತರವೇ ಸ್ಪಷ್ಟವಾದ ಕಾರಣ ತಿಳಿಯಲಿದೆ' ಎಂದು ತಿಳಿಸಿದರು.
'ಈ ಹಿಂಡಿನಲ್ಲಿ ಒಟ್ಟು 13 ಆನೆಗಳಿದ್ದವು. ಮೂರು ಆನೆಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಅಧಿಕಾರಿಯು ವಿವರಿಸಿದರು.
ಆತಂಕಕಾರಿ -ಕಾಂಗ್ರೆಸ್
ಏಳು ಆನೆಗಳ ಸಾವಿನ ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. 'ಈ ಘಟನೆ ಆತಂಕಕಾರಿ. ಸಮಗ್ರ ತನಿಖೆ ನಡೆಸಬೇಕು ಹಾಗೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ. ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು 'ಇದರೊಂದಿಗೆ ಮೀಸಲು ಅರಣ್ಯದಲ್ಲಿ ಏಕಕಾಲಕ್ಕೆ ಆನೆಗಳ ಸಂತತಿ ಶೇ 10ರಷ್ಟು ಕುಗ್ಗಿದಂತಾಗಿದೆ' ಎಂದಿದ್ದಾರೆ. ಪೋಸ್ಟ್ ಅನ್ನು ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೂ ಟ್ಯಾಗ್ ಮಾಡಿದ್ದಾರೆ.