ನವದೆಹಲಿ (PTI): ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಪರಿಷ್ಕರಣೆಯು 2025ರ ಆರಂಭದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಜನಗಣತಿ ಮೂಲಕ ಲಭ್ಯವಾಗುವ ದತ್ತಾಂಶವನ್ನು 2026ರ ಒಳಗೆ ಬಹಿರಂಗಪಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಜನಗಣತಿಯನ್ನು 1951ರಿಂದ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ನಡೆಸುತ್ತಾ ಬರಲಾಗಿದೆ. ಇದರ ಪ್ರಕಾರ, ಜನಗಣತಿಯು 2021ರಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆ ವರ್ಷ ಜನಗಣತಿ ನಡೆಯಲಿಲ್ಲ. ಈಗ 2025ರಲ್ಲಿ ಇದು ನಡೆದರೆ, ಮುಂದಿನ ದಶವಾರ್ಷಿಕ ಜನಗಣತಿಯ ವರ್ಷಗಳಲ್ಲಿ ಬದಲಾವಣೆ ಆಗಲಿದೆ ಎಂದು ಮೂಲಗಳು ವಿವರಿಸಿವೆ.
ಜನಗಣತಿಯ ಜೊತೆಯಲ್ಲೇ ಜಾತಿ ಜನಗಣತಿಯನ್ನೂ ನಡೆಸಬೇಕೇ ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಗೊತ್ತಾಗಿದೆ. ಜನಗಣತಿ ಯಾವಾಗ ನಡೆಯಲಿದೆ ಎಂಬ ಬಗ್ಗೆ ಇದುವರೆಗೆ ಅಧಿಕೃತವಾದ ಘೋಷಣೆ ಹೊರಬಿದ್ದಿಲ್ಲ.
'ಜನಗಣತಿ ಹಾಗೂ ಎನ್‌ಪಿಆರ್ ಕೆಲಸಗಳು ಮುಂದಿನ ವರ್ಷದ ಆರಂಭದಲ್ಲಿ ಶುರುವಾಗುವ ಸಾಧ್ಯತೆ ಹೆಚ್ಚಿದೆ. ದತ್ತಾಂಶವನ್ನು 2026ಕ್ಕೆ ಮೊದಲು ಪ್ರಕಟಿಸಲಾಗುತ್ತದೆ. ಇದರೊಂದಿಗೆ, ದಶವಾರ್ಷಿಕ ಜನಗಣತಿ ನಡೆಯುವ ವರ್ಷ ಕೂಡ ಮುಂದೆ ಬದಲಾವಣೆ ಕಾಣಲಿದೆ. ಅಂದರೆ 2025-2035, 2035-2045 ಮತ್ತು ಇದೇ ರೀತಿಯಲ್ಲಿ ಹತ್ತು ವರ್ಷಗಳಿಗೆ ಒಮ್ಮೆ ಜನಗಣತಿ ಮುಂದಿನ ದಶಕಗಳಲ್ಲಿ ನಡೆಯಲಿದೆ' ಎಂದು ಉನ್ನತ ಮೂಲಗಳು ಹೇಳಿವೆ.
ಜನಗಣತಿ ಸಂದರ್ಭದಲ್ಲಿ ಜನರಿಂದ ಅಗತ್ಯ ಮಾಹಿತಿ ಪಡೆಯಲು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಹಿಂದಿನ ಜನಗಣತಿಗಳ ಸಂದರ್ಭದಲ್ಲಿ ಕೇಳಿದ ಮಾದರಿಯಲ್ಲೇ, ಕುಟುಂಬದ ಯಜಮಾನನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆಯೇ, ಇತರ ಸದಸ್ಯರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದವರೇ ಎಂಬ ಪಶ್ನೆ ಇರಲಿದೆ.
ದೇಶದಲ್ಲಿ ಜಾತಿ ಜನಗಣತಿ ನಡೆಸಬೇಕು, ಆಗ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆ ಖಚಿತವಾಗಿ ಗೊತ್ತಾಗುತ್ತದೆ ಎಂದು ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ.
ಜನಗಣತಿ ದತ್ತಾಂಶ ಪ್ರಕಟವಾದ ನಂತರ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸರ್ಕಾರವು 2026ರಲ್ಲಿ ಮುಂದಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಂವಿಧಾನದ 82ನೆಯ ವಿಧಿಯು, '2026ರ ನಂತರದ ಮೊದಲ ಜನಗಣತಿಯ ಅಗತ್ಯ ಅಂಕಿ-ಅಂಶಗಳು ಪ್ರಕಟವಾಗುವವರೆಗೆ ಲೋಕಸಭೆಯ ಕ್ಷೇತ್ರಗಳ ಪುನರ್ ವಿಂಗಡಣೆಯ ಅಗತ್ಯ ಇರುವುದಿಲ್ಲ' ಎಂದು ಹೇಳಿದೆ. ಅಂದರೆ, 2025ರಲ್ಲಿ ಜನಗಣತಿ ನಡೆದರೆ, ಅದರ ದತ್ತಾಂಶ 2026ರಲ್ಲಿ ಪ್ರಕಟವಾದರೆ, 2025ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಆಗುವುದಿಲ್ಲ. ಮಾಡಲೇಬೇಕು ಎಂದಾದರೆ, 82ನೆಯ ವಿಧಿಗೆ ತಿದ್ದುಪಡಿ ತರಬೇಕಾಗುತ್ತದೆ.
'ಹೀಗಾಗಿ, ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಮೂಲವೊಂದು ವಿವರಿಸಿದೆ.
ಸಮೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಲ್ಲಿಇವು ಇರಬಹುದು...
l ಮನೆಯಲ್ಲಿ ಸಾಮಾನ್ಯವಾಗಿ ಎಷ್ಟು ಜನ ಇರುತ್ತಾರೆ?
l ಮನೆಯ ಮುಖ್ಯಸ್ಥರು ಮಹಿಳೆಯೇ?
l ಮನೆಯಲ್ಲಿ ವಾಸಿಸುವ ದಂಪತಿಗಳ ಸಂಖ್ಯೆ ಎಷ್ಟು?
l ಕುಟುಂಬವು ದೂರವಾಣಿ, ಇಂಟರ್ನೆಟ್ ಸಂಪರ್ಕ ಹೊಂದಿದೆಯೇ? ಸ್ಮಾರ್ಟ್‌ಫೋನ್ ಅಥವಾ ಮೊಬೈಲ್ ಫೋನ್ ಇದೆಯೇ?
l ಕುಟುಂಬದಲ್ಲಿ ಸೈಕಲ್, ದ್ವಿಚಕ್ರವಾಹನ, ಕಾರು, ಜೀಪು ಅಥವಾ ವ್ಯಾನ್ ಇದೆಯೇ?
l ಮನೆಯಲ್ಲಿ ಬಳಕೆ ಮಾಡುವ ಧಾನ್ಯ ಯಾವುದು?
l ಕುಡಿಯುವ ನೀರಿನ ಮೂಲ ಯಾವುದು?
l ಮನೆಯಲ್ಲಿ ಶೌಚಾಲಯ ಇದೆಯೇ, ಇದ್ದರೆ ಅದು ಯಾವ ಬಗೆಯದು?
l ಮನೆಗೆ ಎಲ್‌ಪಿಜಿ ಸಂಪರ್ಕ ಇದೆಯೇ?
ಜನಗಣತಿ: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಆಗ್ರಹ
'ಮುಂದಿನ ಜನಗಣತಿಯು ಜಾತಿವಾರು ವಿವರವಾದ ಗಣತಿಯನ್ನು ಒಳಗೊಂಡಿರುತ್ತದೆಯೇ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಜನಗಣತಿಯನ್ನು ಪೂರಕವಾಗಿ ಬಳಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಹೀಗಾಗಿ ಈ ಕುರಿತು ಸರ್ವಪಕ್ಷ ಸಭೆ ಕರೆಯಬೇಕು' ಎಂದು ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ. ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಹೀಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡಲು ಸರ್ವ ಪಕ್ಷಗಳ ಸಭೆ ಕರೆಯಬೇಕಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಒತ್ತಾಯಿಸಿದ್ದಾರೆ. 'ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಅಧಿಕಾರಾವಧಿಯನ್ನು ಸರ್ಕಾರ ವಿಸ್ತರಿಸಿದೆ. ಇದನ್ನು ಗಮನಿಸಿದರೆ 2021ರಿಂದ ನನೆಗುದಿಗೆ ಬಿದ್ದಿದ್ದ ಜನಗಣತಿ ಕಾರ್ಯ ಸದ್ಯದಲ್ಲಿಯೇ ಆರಂಭವಾಗುವ ಸಾಧ್ಯತೆಗಳಿವೆ ಎಂಬುದು ತಿಳಿದುಬರುತ್ತದೆ' ಎಂದು ಅವರು ಹೇಳಿದ್ದಾರೆ.
ರಿಜಿಸ್ಟ್ರಾರ್ ಜನರಲ್ ಕೇಂದ್ರ ನಿಯೋಜನೆ ಅವಧಿ ವಿಸ್ತರಣೆ
ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರ ಕೇಂದ್ರ ನಿಯೋಜನೆಯನ್ನು 2026ರ ಆಗಸ್ಟ್ 4ರವರೆಗೆ ವಿಸ್ತರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಾರಾಯಣ್ ಅವರು ಉತ್ತರ ಪ್ರದೇಶ ಕೇಡರ್‌ನ 1995ರ ತಂಡದ ಐಎಎಸ್ ಅಧಿಕಾರಿ. 2020ರಿಂದ ಗೃಹ ಸಚಿವಾಲಯದ ಅಡಿಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.