ಹರ್ಯಾಣ :ಹರ್ಯಾಣದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಮರುಚುನಾವಣೆಯನ್ನು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.
ಅರ್ಜಿಯನ್ನು ವಜಾಗೊಳಿಸುವ ಮುನ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, 'ಇದು ಯಾವ ರೀತಿಯ ಅರ್ಜಿ?'
ಬೆಳಿಗ್ಗೆ ಅರ್ಜಿದಾರರು ತುರ್ತು ವಿಚಾರಣೆಗಾಗಿ ವಿಷಯವನ್ನು ಪ್ರಸ್ತಾವಿಸಿದಾಗ ಅರ್ಜಿಯಲ್ಲಿನ ಕೋರಿಕೆಯನ್ನು ನ್ಯಾ.ಚಂದ್ರಚೂಡ್ ಆಕ್ಷೇಪಿಸಿದರು. 'ಚುನಾಯಿತ ಸರಕಾರವೊಂದು ಪ್ರಮಾಣ ವಚನ ಸ್ವೀಕರಿಸುವುದನ್ನು ನಿರ್ಬಂಧಿಸಬೇಕು ಎಂದು ನೀವು ಬಯಸಿದ್ದೀರಾ? ನಾವು ನಿಮಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ, ದಂಡದೊಂದಿಗೆ ನಾವು ಅರ್ಜಿಯನ್ನು ವಜಾಗೊಳಿಸುತ್ತೇವೆ 'ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದರು.
ತಾನು ಈ ವಿಷಯದಲ್ಲಿ ವಾದವನ್ನು ಮಂಡಿಸಲು ಬಯಸಿದ್ದೇನೆ ಎಂದು ವಕೀಲರು ಆಗ್ರಹಿಸಿದ ಬಳಿಕ, ಇಂದೇ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ವೈವಾಹಿಕ ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯ ಬಳಿಕ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಸಂಜೆ ನಾಲ್ಕು ಗಂಟೆಗೆ ಏಳುವ ಸ್ವಲ್ಪ ಮೊದಲು ಅರ್ಜಿಯನ್ನು ಕೈಗೆತ್ತಿಕೊಂಡಿತು.
ವಿದ್ಯುನ್ಮಾನ ಮತಯಂತ್ರಗಳಲ್ಲಿನ ಅಸಮಂಜಸತೆಗಳಿಂದಾಗಿ ತಾನು 20 ವಿಧಾನಸಭಾ ಕ್ಷೇತ್ರಗಳಲ್ಲಿ ಮರುಚುನಾವಣೆಯನ್ನು ಕೋರುತ್ತಿದ್ದೇನೆ ಎಂದು ಹೇಳಿದ ಅರ್ಜಿದಾರರ ಪರ ವಕೀಲರು,ಈ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಅಹವಾಲು ಸಲ್ಲಿಸಿದೆ ಎಂದು ತಿಳಿಸಿದರು.
ಅರ್ಜಿಯಲ್ಲಿ ಕೋರಲಾದ ಪರಿಹಾರಗಳ ಸ್ವರೂಪಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾ.ಚಂದ್ರಚೂಡ್,'ಅರ್ಥವಾಯಿತು,ಅರ್ಜಿಯನ್ನು ವಜಾಗೊಳಿಸಲಾಗಿದೆ 'ಎಂದು ಹೇಳಿದರು.