ನವದೆಹಲಿ: ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಿಂದ ಹಮ್ಮಿಕೊಂಡಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ನವದೆಹಲಿ: ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಿಂದ ಹಮ್ಮಿಕೊಂಡಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಮಾತನಾಡಿ, 'ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ಪಶುಪಾಲನಾ ವಲಯದ ಬೆಳವಣಿಗೆಗೆ ನಿಯಮಾವಳಿ ರೂಪಿಸಲು ಈ ಗಣತಿ ಕಾರ್ಯದಲ್ಲಿ ಸಂಗ್ರಹಿಸುವ ದತ್ತಾಂಶವು ಸಹಕಾರಿಯಾಗಲಿದೆ' ಎಂದರು.
ಜಾನುವಾರು ಗಣತಿಯು ಪಾರದರ್ಶಕವಾಗಿ ನಡೆಯಲಿದೆ. ಸಚಿವಾಲಯದ ಅಧಿಕಾರಿಗಳು ಗಣತಿಯ ಮೇಲ್ವಿಚಾರಣೆ ಮಾಡಲಿದ್ದಾರೆ. ಈ ದತ್ತಾಂಶ ಸಂಗ್ರಹಕ್ಕೆ ₹200 ಕೋಟಿ ನಿಗದಿಪಡಿಸಲಾಗಿದ್ದು, ಇದನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಪ್ರಾಣಿಗಳಿಗೆ ಆರೋಗ್ಯ ರಕ್ಷಣಾ ಸೌಲಭ್ಯ ಕಲ್ಪಿಸಲು 'ಸಾಂಕ್ರಾಮಿಕ ನಿಧಿ ಯೋಜನೆ'ಗೂ ಇದೇ ವೇಳೆ ಚಾಲನೆ ನೀಡಿದ ಸಚಿವರು, ಇದಕ್ಕಾಗಿ ₹210 ಕೋಟಿ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಜಾನುವಾರು ಗಣತಿಯು ಮುಂದಿನ ವರ್ಷದ ಫೆಬ್ರುವರಿವರೆಗೆ ನಡೆಯಲಿದೆ. 2026ಕ್ಕೆ ವರದಿ ಬಿಡುಗಡೆಯಾಗಲಿದೆ ಎಂದರು.
---
ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಹಾಲು ಮತ್ತು ಅದರ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ
-ರಾಜೀವ್ ರಂಜನ್ ಸಿಂಗ್ ಕೇಂದ್ರ ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ