ಕಾಸರಗೋಡು: ಜಿಲ್ಲೆಯ ಮರಾಟಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಸಮುದಾಯಕ್ಕೆ ಈ ಹಿಂದಿನಂತೆ ಮೀಸಲಾತಿ ಸವಲತ್ತುಗಳನ್ನು ಯಥಾಪ್ರಕಾರ ಪುನ:ಸ್ಥಾಪಿಸುವಂತೆ ಆಗ್ರಹಿಸಿ ಕೇರಳ ಮರಾಟಿ ಸಂರಕ್ಷಣಾ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಅ. 21ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಸಂಘಟನೆ ಜಿಲ್ಲಾಧ್ಯಕ್ಷ ಟಿ. ಸುಬ್ರಾಯ ನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ವರ್ಗ ಮರಾಟಿ ಸಮುದಾಯದ ಹೆಸರಲ್ಲಿ ನಕಲಿ ಜಾತಿ ಸರ್ಟಿಫಿಕೇಟ್ ಪಡೆದು ವ್ಯಾಪಕವಾಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದು, ಇದರಿಂದ ಮರಾಟಿ ಸಮುದಾಯದ ಜನತೆಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಜಿಲ್ಲೆಯ ನೆಟ್ಟಣಿಗೆ ಗ್ರಾಮಾಧಿಕಾರಿ ಕಚೇರಿಯಿಂದ ನಕಲಿ ಜಾತಿ ಸರ್ಟಿಫಿಕೇಟ್ ಪಡೆದು ಸರ್ಕಾರಿ ಕೆಲಸಕ್ಕೆ ಸೇರ್ಪಡೆಗೊಂಡ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕು, 2003ರ ವರೆಗೆ ಮರಾಟಿ ಜನಸಂಖ್ಯೆ ಆಧಾರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದ ಮೀಸಲಾತಿ ವ್ಯವಸ್ಥೆಯನ್ನು ಪುನ:ಸ್ಥಾಪಿಸಬೇಕು, ಆನ್‍ಲೈನ್ ಮೂಲಕ ಚಿಕಿತ್ಸಾ ಫಂಡಿಗಾಗಿ ಅರ್ಜಿ ಸಲ್ಲಿಕೆ ಸಂದರ್ಭ ಮರಾಟಿ ಎಂಬ ಹೆಸರು ಒಳಪಡಿಸಬೇಕು, ಎಲ್ಲಾ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಲಭಿಸಿರುವ ಪ.ವರ್ಗ ಮೀಸಲಾತಿಗಿರುವ ಸವಲತ್ತು ಒದಗಿಸಬೇಕು, ಪ.ವರ್ಗ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳು ಮಂಜೂರುಗೊಳಿಸುವ ಮೊತ್ತ ಪೂರ್ಣರೀತಿಯಲ್ಲಿ ವಿನಿಯೋಗಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್, ಕೋಶಾಧಿಕಾರಿ ಮಾಯಿಲ ನಾಯ್ಕ್ ಬಜಕೂಡ್ಲು, ಶ್ಯಾಮ ಪ್ರಸಾದ್ ಮಾನ್ಯ, ರಾಧಾಕೃಷ್ಣ, ನಾರಾಯಣ ನಾಯ್ಕ್ ಅಡ್ಕಸ್ಥಳ ಉಪಸ್ಥಿತರಿದ್ದರು.