ಬೈರೂತ್: ಹಿಜ್ಬುಲ್ಲಾ ಬಂಡುಕೋರರ ಗುರಿಯಾಗಿಸಿ ಇಸ್ರೇಲ್ ಭಾನುವಾರ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಸರಣಿ ದಾಳಿ ಮುಂದುವರಿಸಿದೆ. ಇದರಿಂದ ಬೈರೂತ್‌ನಲ್ಲಿ ದಿಗಂತವನ್ನು ದಟ್ಟ ಹೊಗೆ, ಬೆಂಕಿ ಜ್ವಾಲೆ ಆವರಿಸಿದ್ದವು.
ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಅಕ್ಟೋಬರ್ 7ಕ್ಕೆ ವರ್ಷವಾಗಲಿದೆ.
ಗಾಜಾಪಟ್ಟಿಯಲ್ಲಿ ಭಾನುವಾರ ಇಸ್ರೇಲ್ ಸೇನೆಯು ಮಸೀದಿ ಮತ್ತು ಶಾಲಾ ಕಟ್ಟಡವನ್ನು ಗುರಿಯಾಗಿಸಿ ನಡೆಸಿರುವ ಪ್ರತ್ಯೇಕ ದಾಳಿಯಲ್ಲಿ 23 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾನುವಾರ ಬೈರೂತ್‌ನ ದಕ್ಷಿಣ ಭಾಗದಲ್ಲಿ ದಾಳಿ ಮುಂದುವರಿದಂತೆ, ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ, ಕದನವಿರಾಮ ಘೋಷಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.
ಹಮಾಸ್ ಬಂಡುಕೋರರು ಅಪ್ರಚೋದಿತ ದಾಳಿ ಆರಂಭಿಸಿದ್ದಕ್ಕೆ ಪ್ರತೀಕಾರವಾಗಿ ವರ್ಷದ ಹಿಂದೆ ಹಮಾಸ್ ಬಂಡುಕೋರರ ಹತ್ತಿಕ್ಕುವ ಗುರಿಯೊಂದಿಗೆ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ದಾಳಿ ಆರಂಭಿಸಿತ್ತು.
ಲೆಬನಾನ್‌ನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪ್ರಮುಖ ಕಟ್ಟಡ ಮತ್ತು ಹಿಜ್ಬುಲ್ಲಾದ ಸುದ್ದಿ ಮಾಧ್ಯಮ ಅಲ್ ಮನಾರ್ ಬಳಸುತ್ತಿದ್ದ ಇನ್ನೊಂದು ಕಟ್ಟಡದ ಮೇಲೆ ದಾಳಿ ನಡೆದಿದೆ.
ಲೆಬನಾನ್‌ನ ಅಧಿಕೃತ ಸುದ್ದಿ ಮಾಧ್ಯಮದ ಪ್ರಕಾರ, ಭಾನುವಾರ 30ಕ್ಕೂ ಹೆಚ್ಚು ಬಾರಿ ನಿಯಮಿತವಾಗಿ ದಾಳಿ ನಡೆದಿದೆ. ಪೆಟ್ರೋಲ್ ಬಂಕ್ ಮತ್ತು ಔಷಧ ದಾಸ್ತಾನು ಗೋದಾಮು ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ದಾಳಿಯಿಂದಾಗಿ ಭೂಕಂಪನದ ಅನುಭವವಾಯಿತು ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದರು. ಸಾಬ್ರಾ ವಲಯದಲ್ಲಿ ಆತಂಕಗೊಂಡಿದ್ದ ಜನರು ಸುರಕ್ಷಿತ ತಾಣದತ್ತ ಧಾವಿಸುತ್ತಿದ್ದುದು ಕಂಡುಬಂದಿತು.
ಭದ್ರತೆ ಕಾರಣಗಳಿಂದಾಗಿ ಲೆಬನಾನ್‌ನಲ್ಲಿ ಶೈಕ್ಷಣಿಕ ವರ್ಷದ ಆರಂಭವನ್ನು ನವೆಂಬರ್ 4ರವರೆಗೂ ಮುಂದೂಡಲಾಗಿದೆಎಂದು ಶಿಕ್ಷಣ ಸಚಿವರು ಪ್ರಕಟಿಸಿದ್ದಾರೆ.
ಇಸ್ರೇಲ್ ಸೇನೆ ದಾಳಿಯಿಂದ ಗಾಜಾಪಟ್ಟಿಯಲ್ಲಿ 42 ಸಾವಿರ ಪ್ಯಾಲೆಸ್ಟೀನಿಯರು ಸತ್ತಿದ್ದಾರೆ. ಇವರಲ್ಲಿ ಅರ್ಧದಷ್ಟು ಮಹಿಳೆಯರು, ಮಕ್ಕಳು. ಲೆಬನಾನ್‌ನಲ್ಲಿ ನಡೆದಿರುವ ದಾಳಿಯಲ್ಲಿ ಸೆಪ್ಟೆಂಬರ್ 23ರಿಂದ ಈವರೆಗೂ ಸುಮಾರು 2 ಸಾವಿರ ಜನರು ಸತ್ತಿದ್ದಾರೆ.
ದಿನದ ಬೆಳವಣಿಗೆ
ಲೆಬನಾನ್ ಗಡಿಯಲ್ಲಿ ನಿಯೋಜಿಸಿದ ಸೇನೆ ಭೇಟಿಯಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಲೆಬನಾನ್ ದಕ್ಷಿಣ ಪ್ರದೇಶ ಗುರಿಯಾಗಿಸಿ 30ಕ್ಕೂ ಹೆಚ್ಚು ವಾಯುದಾಳಿ ನಡೆಸಿದ ಸೇನೆ
ಸಿರಿಯಾದ ಕಾರು ತಯಾರಿಕಾ ಘಟಕದ ಮೇಲೆ ಇಸ್ರೇಲ್ ದಾಳಿ, ಧ್ವಂಸ. ಪ್ರಾಣ ಹಾನಿ ಇಲ್ಲ.
ಉತ್ತರ ಗಾಜಾದ, ನಿರಾಶ್ರಿತರೇ ಹೆಚ್ಚಿರುವ ಜಬಾಲಿಯ ವಲಯ ತೆರವಿಗೆ ಇಸ್ರೇಲ್ ಸೇನೆ ಆದೇಶ.
ಇರಾನ್‌ನ ತೈಲ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡಸದಿರಲಿ- ಅಮೆರಿಕ ಅಧ್ಯಕ್ಷ ಜೋ ಬೈಡನ್
ಗಾಜಾ: ಮಸೀದಿ ಶಾಲಾ ಕಟ್ಟಡದ ಮೇಲೆ ದಾಳಿ
ಜೆರುಸಲೇಂ: ಗಾಜಾ ಕೇಂದ್ರ ಭಾಗದಲ್ಲಿ ಇಸ್ರೇಲ್ ಸೇನೆ ಭಾನುವಾರ ಮಸೀದಿಯೊಂದರ ಮೇಲೆ ವಾಯು ದಾಳಿ ನಡೆಸಿದೆ. 19 ಜನರು ಮೃತಪಟ್ಟಿದ್ದಾರೆ ಎಂದ ಪ್ಯಾಲೆಸ್ಟೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾದ ದೇರ್ ಅಲ್ ಬಲಾಹ್ ಪಟ್ಟಣದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದ ಮಸೀದಿ ಮೇಲೆ ದಾಳಿ ನಡೆದಿದೆ. ಮತ್ತೊಂದು ಕಡೆ ಶಾಲೆ ಕಟ್ಟಡದ ಮೇಲೂ ದಾಳಿ ನಡೆದಿದ್ದು ನಾಲ್ವರು ಮೃತಪಟ್ಟಿದ್ದಾರೆ. ಎರಡೂ ಕಡೆ ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು ಎಂದು ಸೇನೆಯು ತಿಳಿಸಿದೆ.
ತಿರುಗೇಟು ಖಚಿತ ಅನುಮಾನವೇ ಬೇಡ -ಇರಾನ್
ಟೆಹರಾನ್: ಇಸ್ರೇಲ್ ದಾಳಿಗೆ ಪ್ರತ್ಯುತ್ತರ ನೀಡಲು ಇರಾನ್ ಸಜ್ಜಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಲು ಯೋಜನೆ ಸಿದ್ಧವಾಗಿದೆ ಎಂದು ಇರಾನ್‌ನ ಸೇನೆ ತಿಳಿಸಿದೆ.
ಸೇನೆಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ಈ ಕುರಿತು ವರದಿ ಮಾಡಿದೆ. ಮಂಗಳವಾದಂದು ಇರಾನ್‌ನ ಐಆರ್‌ಜಿಸಿ ಪಡೆಯು 200 ಕ್ಷಿಪಣಿಗಳನ್ನು ಇಸ್ರೇಲ್‌ನಂತ ಪ್ರಯೋಗಿಸಿತ್ತು.
'ಇಸ್ರೇಲ್ ದಾಳಿ ಮುಂದುವರಿದರೆ ಇರಾನ್ ಉತ್ತರ ನೀಡುವುದರಲ್ಲಿ ಅನುಮಾನವೇ ಬೇಡ. ದಾಳಿ ನಡೆಸಬೇಕಾದ ಇಸ್ರೇಲ್ ತಾಣಗಳ ಪಟ್ಟಿ ಇರಾನ್ ಬಳಿ ಈಗಾಗಲೇ ಇದೆ. ತಾನು ಬಯಸಿದ ಯಾವುದೇ ತಾಣದ ಮೇಲೆ ದಾಳಿ ನಡೆಸಬಲ್ಲೆವು ಎಂದೂ ತೋರಿಸಿದ್ದೇವೆ' ಎಂದು ವರದಿ ಉಲ್ಲೇಖಿಸಿದೆ.