ಸಿವಾನ್/ಸಾರಣ್: ಮದ್ಯಪಾನ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಎರಡು ದಿನಗಳಲ್ಲಿ 24 ಜನರು ಮೃತಪಟ್ಟಿದ್ದಾರೆ.
ಸಿವಾನ್ ಮತ್ತು ಸಾರಣ್ ಜಿಲ್ಲೆಗಳಲ್ಲಿ ಈ ದುರಂತ ಸಂಭವಿಸಿದೆ. ಎರಡೂ ಜಿಲ್ಲೆಗಳಲ್ಲಿ ಬುಧವಾರ ಆರು ಮಂದಿ ಮೃತಪಟ್ಟಿದ್ದರು. ಗುರುವಾರ 18 ಮಂದಿ ಮೃತಪಟ್ಟಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದ ಕುರಿತು ಬಿಹಾರ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಎಂಟು ವರ್ಷಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾರಿಗೊಳಿಸಿದ್ದ ಮದ್ಯಪಾನ ನಿಷೇಧದ ಸಮರ್ಪಕ ಅನುಷ್ಠಾನ ಆಗಿದೆಯೇ ಎಂದು ಅವರು ಪ್ರಶ್ನಿಸಿವೆ.
ಕಠಿಣ ಕ್ರಮಕ್ಕೆ ಸಿ.ಎಂ ಸೂಚನೆ: ದುರಂತದ ಬೆನ್ನಲ್ಲೇ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಸಭೆ ನಡೆಸಿ 'ಕಾನೂನುಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ' ಸೂಚನೆ ನೀಡಿದ್ದಾರೆ.
'ಸಿವಾನ್ ಜಿಲ್ಲೆಯ ಮಘರ್ ಮತ್ತು ಔರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಕಲಿ ಮದ್ಯ ಕುಡಿದು ಒಟ್ಟು 20 ಜನರು ಹಾಗೂ ಸಾರಣ್ ಜಿಲ್ಲೆ ವ್ಯಾಪ್ತಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ' ಎಂದು ಸಾರಣ್ ವಲಯದ ಡಿಐಜಿ ನೀಲೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ, 25ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವರು ಸಿವಾನ್, ಸಾರಣ್ ಮತ್ತು ಪಟ್ನಾ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಖಚಿತ ಕಾರಣ ತಿಳಿಯಲಿದೆ ಎಂದು ಡಿಐಜಿ ತಿಳಿಸಿದರು.
ಮೂವರ ಅಮಾನತು: ನಿರ್ಲಕ್ಷ್ಯದ ಆರೋಪದ ಜಿಲ್ಲಾಡಳಿತವು ಮಘರ್, ಔರಿಯಾ ಮತ್ತು ಇಬ್ರಾಹಿಂಪುರ ಪ್ರದೇಶಗಳ ಮೂವರು ಚೌಕಿದಾರರನ್ನು ಅಮಾನತುಗೊಳಿಸಿದೆ. ಅಲ್ಲದೆ ಐದು ಪೊಲೀಸ್ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ತೇಜಸ್ವಿ ವಾಗ್ದಾಳಿ: 'ನಕಲಿ ಮದ್ಯ ಕುಡಿದು ರಾಜ್ಯದಲ್ಲಿ ಹಲವರು ಮೃತಪಟ್ಟಿದ್ದರೆ, ಸುಮಾರು 12 ಜನರು ದೃಷ್ಟಿ ಕಳೆದುಕೊಂಡಿದ್ದಾರೆ. ಬಿಹಾರದಲ್ಲಿ ಮದ್ಯ ವ್ಯಾಪಾರ ನಿಷೇಧವಿದ್ದರೂ ಆಡಳಿತ ಪಕ್ಷದ ನಾಯಕರ ಜತೆ ನಂಟು ಹೊಂದಿರುವವರು, ಪೊಲೀಸ್ ಮತ್ತು ಮಾಫಿಯಾದವರ ಸಹಕಾರದಿಂದ ಎಲ್ಲೆಡೆ ಮದ್ಯ ಲಭ್ಯವಿದೆ' ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ 'ಎಕ್ಸ್'ನಲ್ಲಿ ದೂರಿದ್ದಾರೆ.
'ರಾಜ್ಯದಲ್ಲಿ ನಿತ್ಯ ನಕಲಿ ಮದ್ಯ ಸೇವಿಸಿ ಸಾವುಗಳು ಸಂಭವಿಸುತ್ತಿವೆ. ಅಲ್ಲದೆ ಇದರಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಇದು ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಯ ವೈಫಲ್ಯವನ್ನು ತೋರಿಸುತ್ತದೆ. ಇಷ್ಟು ಜನರ ಸಾವಿಗೆ ಯಾರು ಹೊಣೆಗಾರರು?' ಎಂದು ಅವರು ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬಿಹಾರ ಸರ್ಕಾರ 2016ರ ಏಪ್ರಿಲ್ 5ರಂದು ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿತ್ತು. 2016ರ ಬಳಿಕ ನಕಲಿ ಮದ್ಯ ಕುಡಿದು ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು.