2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೂ ಕೆಲವು ಗಂಟೆಗಳ ಮುನ್ನ ಖಾನ್ ಯೂನಿಸ್‌ನಲ್ಲಿರುವ ತನ್ನ ನಿವಾಸದಡಿ ಇರುವ ಸುರಂಗದ ಮೂಲಕ ಹಮಾಸ್ ನಾಯಕ ಯಹ್ಯಾ ಸಿನ್ವರ್ ಪಲಾಯನ ಮಾಡುವ ವಿಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ದಾಳಿಗೂ ಮುನ್ನ ತನ್ನ ಕುಟುಂಬ ಸಮೇತ ರಕ್ಷಣೆ ಪಡೆಯಲು ಮಾಡುತ್ತಿರುವ ತಯಾರಿ ಎಂದು ವಿಡಿಯೊ ಬಗ್ಗೆ ಇಸ್ರೇಲ್ ಹೇಳಿದೆ.
'ಹತ್ಯಾಕಾಂಡದ ದಿನದಂದು ಸಿನ್ವರ್ ತಾನು ಹಾಗೂ ತನ್ನ ಕುಟುಂಬವನ್ನು ರಕ್ಷಿಸುವುದರಲ್ಲಿ ನಿರತನಾಗಿದ್ದ. ಆತ ತನ್ನ ಹಾಗೂ ತನ್ನ ಕುಟುಂಬದ ಸುರಕ್ಷತೆ ಬಗ್ಗೆ ಮಾತ್ರ ಕಾಳಜಿ ವಹಸಿ, ಇಸ್ರೇಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರನ್ನು ಕೊಲ್ಲಲು ಉಗ್ರಗಾಮಿಗಳನ್ನು ಕಳುಹಿಸಿದ್ದ' ಎಂದು ಇಸ್ರೇಲಿ ರಕ್ಷಣಾ ಪಡೆಯ (ಐಡಿಎಫ್) ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗಾರಿ ತಿಳಿಸಿದ್ದಾರೆ.
ಸಿನ್ವರ್ ಪತ್ನಿ ಕೈಯಲ್ಲಿ ₹ 27 ಲಕ್ಷದ ಬ್ಯಾಗ್
ಎರಡೂ ಕೈಗಳಲ್ಲಿ ಬ್ಯಾಗುಗಳನ್ನು ಹಿಡಿದುಕೊಂಡು ಮಕ್ಕಳು ಹಾಗೂ ಪತ್ನಿಯೊಂದಿಗೆ ಪಲಾಯನ ಮಾಡುವ ದೃಶ್ಯಗಳು ಇಸ್ರೇಲ್ ಬಿಡುಗಡೆ ಮಾಡಿದ ವಿಡಿಯೊದಲ್ಲಿದೆ. ಈ ವೇಳೆ ಪತ್ನಿಯ ಕೈಯಲ್ಲಿರುವ ಬ್ಯಾಗ್‌ನ ದರವನ್ನೂ ಉಲ್ಲೇಖಿಸಿರುವ ಇಸ್ರೇಲ್, ಗಾಜಾ ನಾಗರಿಕರು ಸಂಕಷ್ಟದಲ್ಲಿರುವಾಗ ಸಿನ್ವರ್ ಹಾಗೂ ಆತನ ಕುಟುಂಬ ಐಷಾರಾಮಿ ಜೀವನ ನಡೆಸುತ್ತಿತ್ತು ಎಂದು ಹೇಳಿದೆ.
ಸುರಂಗ ಮೂಲಕ ಪಲಾಯನ ಮಾಡುವಾಗ ಆತನ ಪತ್ನಿ ಸಮರ್ ಮುಹಮ್ಮದ್ ಅಬೂ ಜಮರ್ ಕೈಯಲ್ಲಿ ₹27 ಲಕ್ಷದ ಐಷಾರಾಮಿ 'ಹರ್ಮಸ್' ಕಂಪನಿಯ 'ಬಿರ್ಕಿನ್ ಬ್ಯಾಗ್' ಇತ್ತು ಎಂದು ಇಸ್ರೇಲ್ ಹೇಳಿದೆ. ಅಲ್ಲದೆ ಆಕೆ ಬ್ಯಾಗ್ ಹಿಡಿದುಕೊಂಡಿರುವ ಹಾಗೂ ಫೋಟೊ ಸಹಿತ ಬ್ಯಾಗ್‌ನ ದರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಇದು ಅವರ ಐಷಾರಾಮಿ ಜೀವನ ಶೈಲಿಯ ಪ್ರತೀಕ. ಗಾಜಾ ನಾಗರಿಕರು ಹಮಾಸ್‌ನಿಂದಾಗಿ ಕಷ್ಟವನ್ನು ಸಹಿಸಿಕೊಂಡರೆ, ಸಿನ್ವರ್ ಮತ್ತು ಅವರ ಕುಟುಂಬವು ನಾಚಿಕೆಯಿಲ್ಲದೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಇತರರನ್ನು ಸಾಯಲು ಕಳುಹಿಸುತ್ತಿದ್ದರು' ಎಂದು ಬರೆದುಕೊಂಡಿದೆ.
1984ರಲ್ಲಿ ಹರ್ಮನ್ ಕಂಪನಿಯು ಈ ಬ್ರಿರ್ಕಿನ್ ಬ್ಯಾಗ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ದುಬಾರಿ ಬೆಲೆ ಹಾಗೂ ಸೀಮಿತ ಲಭ್ಯತೆಯಿಂದಾಗಿ ಇದು ಐಷಾರಾಮದ ಸಂಕೇತ.
'ಗಾಜಾದ ಜನರಿಗೆ ಟೆಂಟ್ ಅಥವಾ ಇತರ ಮೂಲಭೂತ ಸೌಕರ್ಯಕ್ಕೆ ಹಣವಿಲ್ಲ. ಆದರೆ ಯಹ್ಯಾ ಸಿನ್ವರ್ ಹಾಗೂ ಆತನ ಪತ್ನಿಗೆ ಇದ್ದ ಹಣದ ವ್ಯಾಮೋಹದ ಬಗ್ಗೆ ಹಲವು ಉದಾಹರಣೆಗಳನ್ನು ನೋಡಬಹುದು' ಎಂದು ಐಡಿಎಫ್‌ನ ಅರೆಬಿಕ್ ಭಾಷಾಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅವಿಚಯ್ ಅದ್ರಾಯಿ ಹೇಳಿದ್ದಾರೆ.