ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಎರಡು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ 'ಆರೆಂಜ್ ಅಲರ್ಟ್' ಘೋಷಿಸಿದೆ.
ಮಲಪ್ಪುರಂ ಮತ್ತು ಕಣ್ಣೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಕೋಯಿಕ್ಕೋಡ್, ವಯನಾಡ್ ಮತ್ತು ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಭೂಕುಸಿತದ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಬೇಕು. ಜತೆಗೆ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಸ್‌ಡಿಎಂಎ) ಅಧಿಕಾರಿಗಳು ಮನವಿ ಮಾಡಿದ್ದಾರೆ.
ನದಿಗಳ ತೀರದಲ್ಲಿ ವಾಸಿಸುವ ಜನರನ್ನೂ ಸಹ ಸ್ಥಳಾಂತರಿಸಬೇಕು ಎಂದು ಎಸ್‌ಡಿಎಂಎ ಹೇಳಿದೆ.