ಬದಿಯಡ್ಕ: ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬದಿಯಡ್ಕದ ಲಾಟರಿ ಅಂಗಡಿ ವ್ಯಾಪಾರಿಯಿಂದ 2ಸಾವಿರ ರೂ. ಎಗರಿಸಿ ಪರಾರಿಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪಡಿಯಡ್ಪು ನಿವಸಿ ಶಿವಪ್ಪ ನಾಯ್ಕ್ ಎಂಬವರ ಪತ್ನಿ ಶಾಂತಾ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಶನಿವಾರ ಮಧ್ಯಾಹ್ನ ಅಂಗಡಿಗೆ ಆಗಮಿಸಿದ ಅಪರಿಚಿತ ಯುವಕನೊಬ್ಬ ತಾನು ಪೊಲೀಸ್ ಅಧಿಕಾರಿಯೆಂದು ತಿಳಿಸಿ, ತುರ್ತಾಗಿ 5ಸಾವಿರ ರೂ.. ನೀಡುವಂತೆ ಹಾಗೂ ಹಣವನ್ನು ತಕ್ಷಣ ಹಿಂತಿರುಗಿಸುವುದಗಿ ತಿಳಿಸಿದ್ದಾನೆ. ಯುವಕನ ಮಾತಿನ ಮೇಲೆ ಭರವಸೆಯಿಟ್ಟ ಶಾಂತ ಅವರು ಅಂಗಡಿಯಲ್ಲಿದ್ದ 2ಸಾವಿರ ರೂ. ಆತನ ಕೈಗಿತ್ತಿದ್ದಾರೆ. ಅಲ್ಲಿಂದ ಕಾಲ್ಕಿತ್ತ ವ್ಯಕ್ತಿ ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ವಂಚನೆ ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದರು.
ತಿಂಗಳ ಹಿಂದೆ ನೀರ್ಚಾಲಿನಲ್ಲಿ ಇದೇ ರೀತಿ ಲಾಟರಿ ಅಂಗಡಿಯೊಂದರಿಂದ 1250ರೂ. ಪಡೆದು ಯುವಕನೊಬ್ಬ ಪರಾರಿಯಾಗಿದ್ದು, ನಂತರ ಈ ವ್ಯಕ್ತಿಯನ್ನು ಮಂಜೇಶ್ವರದಿಂದ ಬಂಧಿಸಿದ್ದರು.