ತಿರುವನಂತಪುರಂ: ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಲೋಪವೆಸಗಿದ ಘಟನೆಯಲ್ಲಿ ಎರಡು ಲಕ್ಷ ರೂ.ಪರಿಹಾರ ಧನ ವಿತರಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಆದೇಶ ನೀಡಿದೆ.
ಅಲ್ಲದೆ, ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಶಾಲಾ ವ್ಯವಸ್ಥಾಪಕರೇ ಭರಿಸಬೇಕೆಂದು ಆಯೋಗದ ಸದಸ್ಯೆ ಎನ್.ಸುನಂದಾ ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ. ಆಯೋಗವು ಅರ್ಜಿ, ವರದಿಗಳು, ದಾಖಲೆಗಳು ಮತ್ತು ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಸಮಗ್ರ ತನಿಖೆ ನಡೆಸಿದ ಆಯೋಗವು ಗುಡ್ ಶೆಫರ್ಡ್ ಕಿಂಡರ್ ಗಾರ್ಟನ್ ಶಾಲೆಯ ಯುಕೆಜಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಗ್ರೂಪ್ ಪೋಟೋ ತೆಗೆಯುವಾಗ ಬೆಂಚಿನ ಮೇಲಿಂದ ಬಿದ್ದು ಗಾಯಗೊಂಡಿದ್ದನ್ನು ಪತ್ತೆ ಮಾಡಿದೆ. ಶಾಲಾ ಅಧಿಕಾರಿಗಳು ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಫಲವಾಗಿರುವುದರಿಂದ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆಯೋಗವು ಮೌಲ್ಯಮಾಪನ ಮಾಡಿದೆ. ಮಗುವಿನ ಮಾನಸಿಕ ಮತ್ತು ದೈಹಿಕ ಆಘಾತದ ಆರ್ಥಿಕ ನೆರವಿನ ಮೊತ್ತವನ್ನು ಭವಿಷ್ಯದ ಚಿಕಿತ್ಸೆಗಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಮತ್ತು ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲ, ಮುಖ್ಯೋಪಾಧ್ಯಾಯರಿಗೆ ಕಡ್ಡಾಯವಾದ ಮಕ್ಕಳ ಹಕ್ಕು ಅರಿವು ತರಗತಿ ನೀಡಲೂ ಶಾಲಾ ಪ್ರಬಂಧಕರಿಗೆ ಆಯೋಗ ನಿರ್ದೇಶನ ನೀಡಿದೆ.