ನವದೆಹಲಿ: ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡುವುದಕ್ಕೆ ಅಪರಾಧಿಯು ಕಡ್ಡಾಯವಾಗಿ ಎರಡು ವರ್ಷ 'ಸಭ್ಯವಾಗಿ' ನಡೆದುಕೊಂಡಿರಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
'ಈ ಷರತ್ತು ನಿರಂಕುಶ, ಗೊಂದಲಕಾರಿ ಹಾಗೂ ವ್ಯಕ್ತಿನಿಷ್ಠವಾಗಿದೆ' ಎಂದಿರುವ ಸುಪ್ರೀಂ ಕೋರ್ಟ್, ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವೂ ಆಗಲಿದೆ' ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಹೀಹ್ ಅವರು ಇದ್ದ ನ್ಯಾಯಪೀಠವು, 'ಸಿಆರ್‌ಪಿಸಿ ಅಥವಾ ಅದಕ್ಕೆ ಸಮಾನವಾದ ಇತರ ಕಾಯ್ದೆಯಲ್ಲಿ ಸಭ್ಯ ಅಥವಾ ಅಸಭ್ಯ ಎಂಬ ಬಗ್ಗೆ ವ್ಯಾಖ್ಯಾನವೇ ಇಲ್ಲ' ಎಂದು ಹೇಳಿದೆ.
'ಅಪರಾಧಿಯೊಬ್ಬನಿಗೆ ಕ್ಷಮಾದಾನ ನೀಡುವ ಇಲ್ಲವೇ ನೀಡದಿರುವ ನಿರ್ಧಾರವು ತರ್ಕಬದ್ಧವಾಗಿರಬೇಕು ಹಾಗೂ ಸಂಬಂಧಪಟ್ಟವರಿಗೆ ನ್ಯಾಯಸಮ್ಮತವಾಗಿರಬೇಕು' ಎಂದು ಸೋಮವಾರ ನೀಡಿರುವ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.
'ಸಿಆರ್‌ಪಿಸಿ ಸೆಕ್ಷನ್ 432ರ ಸಬ್‌ಸೆಕ್ಷನ್(1) ಅಡಿ ದತ್ತವಾದ ಅಧಿಕಾರ ಬಳಸಿ ಇಂತಹ ಷರತ್ತನ್ನು ವಿಧಿಸಲು ನೀಡುವ ಅವಕಾಶವು, ಅಪರಾಧಿಗೆ ನೀಡಿದ ಕ್ಷಮಾದಾನವನ್ನು ತಮಗೆ ತೋಚಿದಂತೆ ರದ್ದು ಮಾಡಲು ಅಧಿಕಾರಿಗಳ ಕೈಗೆ ನೀಡುವ ಅಸ್ತ್ರವಾಗಲಿದೆ' ಎಂದು ನ್ಯಾಯಪೀಠ ಹೇಳಿದೆ.
'ಕ್ಷಮಾದಾನ ತನ್ನ ಹಕ್ಕು ಎಂಬಂತೆ ಅಪರಾಧಿ ಕೋರುವಂತಿಲ್ಲ. ಆದರೆ, ಕಾನೂನು ಪ್ರಕಾರ ಹಾಗೂ ಸರ್ಕಾರದ ನೀತಿಯ ಅನ್ವಯ ತನಗೆ ಕ್ಷಮಾದಾನ ನೀಡಲು ಪರಿಗಣಿಸಿ ಎಂಬುದಾಗಿ ಅರ್ಜಿ ಸಲ್ಲಿಸಲು ಆತನಿಗೆ ಹಕ್ಕು ಇದೆ' ಎಂದು ನ್ಯಾಯಪೀಠ ಹೇಳಿದೆ.
ಮಫತ್‌ಭಾಯ್ ಮೋತಿಭಾಯ್ ಸಾಗರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿದೆ.
ಅಪರಾಧಿಯ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಾಗಿತ್ತು ಎಂಬುದು ಆತನಿಗೆ ಕ್ಷಮಾದಾನ ನೀಡಿ ಹೊರಡಿಸಿರುವ ಆದೇಶವನ್ನು ರದ್ದು ಮಾಡುವುದಕ್ಕೆ ಆಧಾರವಾಗದು ಎಂದೂ ಹೇಳಿದೆ.