ಇಟಾನಗರ: ಗಡಿ ರಸ್ತೆಗಳ ಸಂಸ್ಥೆಯ (ಬಾರ್ಡರ್ ರೋಡ್ಸ್ ಆರ್ಗನೈಸೇಷನ್) ಸಾರಿಗೆಗೆ ಸಂಬಂಧಿಸಿದ 75 ಮೂಲಸೌಕರ್ಯ ಯೋಜನೆಗಳನ್ನು ಶನಿವಾರ ವರ್ಚುವಲ್ ಆಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉದ್ಘಾಟಿಸಿದರು.
ಇವುಗಳಲ್ಲಿ 18 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿವೆ.
ವರ್ತಕ್ ಯೋಜನೆಯಡಿ 25.29 ಕಿಮಿ ಉದ್ದದ ಮೂರು ನಿರ್ಣಾಯಕ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಗಳ ಒಟ್ಟು ಮೌಲ್ಯ ₹ 139.14 ಕೋಟಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಹಲವಾರು ಸೇತುವೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಪ್ರಮುಖವೆಂದರೆ ಲಂಗ್ರೊ ಜಿಜಿ-ಡಮಾಂತೆಂಗ್ ರಸ್ತೆಗೆ ನಿರ್ಮಿಸಿರುವ 42.70 ಮೀಟರ್ ಉದ್ದದ ಶೂಂಚು ಸೇತುವೆ. ಇದನ್ನು ವರ್ತಕ್ ಯೋಜನೆಯಡಿ ₹11.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕಿರು ಸೇತುವೆಗಳನ್ನು ಬ್ರಹ್ಮಾಂಕ್ ಯೋಜನೆಯಡಿ ಪೂರ್ಣಗೊಳಿಸಲಾಗಿದ್ದು, ಇವುಗಳ ವೆಚ್ಚ ₹ 73.03 ಕೋಟಿ. ಅರುಣಾಚಲ ಪ್ರದೇಶದಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೆಲಿಪ್ಯಾಡ್ ಅನ್ನೂ ಉದ್ಘಾಟಿಸಲಾಗಿದೆ.
ಇಟಾನಗರದಿಂದ ವರ್ಚುವಲ್ ಆಗಿ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರುಣಾಚಲ ಪ್ರದೇಶದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆ.ಟಿ ಪರ್ಣಾಯಿಕ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, 'ಈ ಯೋಜನೆಗಳಿಂದ ರಾಷ್ಟ್ರೀಯ ಭದ್ರತೆ ಇನ್ನಷ್ಟು ಹೆಚ್ಚಲಿದೆ. ನೆಲ ಹಾಗೂ ಆಗಸದ ನಡುವಿನ ಸಂವಹನ ಸುಧಾರಿಸಲಿದೆ ಮತ್ತು ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ' ಎಂದರು.
ಮುಖ್ಯಮಂತ್ರಿ ಪ್ರೇಮಾ ಖಂಡು ಅವರು ಕೂಡ ವರ್ಚುವಲ್ ಆಗಿ ತಮ್ಮ ಕಚೇರಿಯಿಂದ ಭಾಗವಹಿಸಿದ್ದರು. ಅರುಣಾಚಲ ಪ್ರದೇಶದ ಕಾನೂನು ಸಚಿವ ಕೆಂಟೊ ಜಿನಿ ಅವರು ಪಶ್ಚಿಮ ಸೇಂಗ್ ಜಿಲ್ಲೆಯ ಆಲೊ ಎಂಬಲ್ಲಿ ವ್ಯಕ್ತಿಗತವಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.