ಹೈದರಾಬಾದ್: ಸೈಬರ್ ಅಪರಾಧಿಗಳಿಂದ ಹಣ ಅಕ್ರಮ ವರ್ಗಾವಣೆಯ ನಕಲಿ ಪ್ರಕರಣದಲ್ಲಿ ಸುಮಾರು 30 ತಾಸು 'ಡಿಜಿಟಲ್ ಅರೆಸ್ಟ್' ಆಗಿದ್ದ 44 ವರ್ಷದ ಐ.ಟಿ ಉದ್ಯೋಗಿಯೊಬ್ಬರು, ಪೊಲೀಸರ ನೆರವಿನಿಂದ ಯಾವುದೇ ಹಣ ಕಳೆದುಕೊಳ್ಳದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ವಂಚಕರು ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತ ವ್ಯಕ್ತಿಯನ್ನು ಅ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಂತ್ರಸ್ತನನ್ನು ಬಂಧಿಸುವುದಾಗಿ ಬೆದರಿಸಿ, ₹40 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದರು. ಅ.27ರಂದು ಬೆಳಿಗ್ಗೆ ಸೈಬರ್ ವಂಚಕರ ಕರೆ ಕಡಿತಗೊಂಡ ನಂತರ ಸಂತ್ರಸ್ತ ಹೈದರಾಬಾದ್‌ನ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ವಂಚಕರ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ನಡೆದಿದ್ದು ಹೇಗೆ?:
ಹಣ ಅಕ್ರಮ ವರ್ಗಾವಣೆ ಪ್ರಕರಣ ಮುಂಬೈನಲ್ಲಿ ದಾಖಲಾಗಿರುವುದಾಗಿ ಆತನ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅ.25ರಂದು ರಾತ್ರಿ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು. ಆಗ, ಸಂತ್ರಸ್ತ ಆ ಸಂದೇಶ ನಿರ್ಲಕ್ಷಿಸಿದ್ದರು. ಆದಾಗ್ಯೂ ವಂಚಕರು, ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಅ.26ರಂದು ನಸುಕಿನ 3 ಗಂಟೆಯಲ್ಲಿ ಧ್ವನಿ ಮತ್ತು ದೃಶ್ಯದ ಕರೆ ಮಾಡಿ, ತಾವು ಬಹು ಕೋಟಿ ಹಣ ಅಕ್ರಮ ವರ್ಗಾವಣೆಯಲ್ಲಿ ನಂಟು ಹೊಂದಿರುವುದರಿಂದ ತಮ್ಮನ್ನು ಬಂಧಿಸುವುದಾಗಿ ಬೆದರಿಸಿದ್ದರು.
ಈ ಮಾಹಿತಿಯನ್ನು ಕುಟುಂಬದವರು ಮತ್ತು ಬೇರೆ ಯಾರಿಗೂ ತಿಳಿಸದಂತೆ ಎಚ್ಚರಿಸಿ, ಎಫ್‌ಐಆರ್, ಕೋರ್ಟ್ ಮೊಕದ್ದಮೆ ಹಾಗೂ ವಾರಂಟ್ ನೋಟಿಸ್ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂತ್ರಸ್ತನಿಗೆ ಕಳುಹಿಸಿ, ಹೆದರಿಸಿದ್ದರು.
ಪ್ರಕರಣದಲ್ಲಿ ಬಂಧಿಸಬಾರದೆಂದರೆ ಹಣ ಕೊಡಬೇಕೆಂದು ಬೇಡಿಕೆ ಇರಿಸಿದ್ದಲ್ಲದೆ, ಸಂತ್ರಸ್ತ ಬ್ಯಾಂಕ್ ಖಾತೆಗಳಲ್ಲಿ ಹೊಂದಿರುವ ಹಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಉಳಿತಾಯ ಖಾತೆ ಮತ್ತು ಎಫ್‌ಡಿ ಇಟ್ಟಿರುವ ಹಣ ಸೇರಿ ₹25 ಲಕ್ಷ ಇರುವುದಾಗಿ ಸಂತ್ರಸ್ತ ವಂಚಕರಿಗೆ ಮಾಹಿತಿ ನೀಡಿದ. ನಂತರ ವಂಚಕರು, ಸಂತ್ರಸ್ತನಿಗೆ ಮನೆಯಿಂದ ಹೊರ ಬಂದು ಹೋಟೆಲ್ ಅಥವಾ ಲಾಡ್ಜ್‌ನಲ್ಲಿ ಉಳಿಯುವಂತೆ ಸೂಚಿಸಿ, ಮನೆಯಲ್ಲಿದ್ದರೆ ಪೊಲೀಸರು ಬಂಧಿಸುತ್ತಾರೆ ಎಂದೂ ಹೆದರಿಸಿದ್ದರು. ಸಂತ್ರಸ್ತ ಮಿಯಾಪುರ ಪ್ರದೇಶದಲ್ಲಿರುವ ತನ್ನ ಮನೆಯಿಂದ ಹೊರ ಬಂದು 15 ಕಿ.ಮೀ. ದೂರದ ಅಮೀರ್‌ಪೇಟೆ ಪ್ರದೇಶಕ್ಕೆ ಬೈಕ್‌ನಲ್ಲಿ ಹೋಗಿ ಅ.26ರಂದು ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆ ಪಡೆದು ವಾಸ್ತವ್ಯ ಮಾಡುವವರೆಗೂ ವಂಚಕರು ಕರೆ ಸ್ಥಗಿತಗೊಳಿಸದೆ ನಿರಂತರ ಕಣ್ಗಾವಲಿರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಪರಿಶೀಲನೆಯ ಪ್ರಕ್ರಿಯೆ, ಅ.28ರಂದು ಕೂಡ ಮುಂದುವರಿಯಲಿದೆ. ಆರ್‌ಟಿಜಿಎಸ್ ಮೂಲಕ ಹಣ ಸಂದಾಯವಾದ ನಂತರ ಬಿಡುಗಡೆ ಮಾಡುವುದಾಗಿ ಸಂತ್ರಸ್ತನನ್ನು ನಂಬಿಸಿದ್ದರು. ಅ. 27ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ವಂಚಕರ ಕರೆ ಕಡಿತವಾಗಿದೆ. ಆಗ ಸಂತ್ರಸ್ತ ಸೈಬರ್ ಅಪರಾಧ ಪೊಲೀಸರಿಗೆ ಕರೆ ಮಾಡಿ ನೆರವು ಕೇಳಿದರು. ಕರೆ ಸ್ವೀಕರಿಸಿದ ಕಾನ್‌ಸ್ಟೆಬಲ್ ಎಂ. ಗಣೇಶ್ ಸಂತ್ರಸ್ತನಿಗೆ ಇದೊಂದು ವಂಚನೆಯ ಕರೆ, ಹೆದರಿಕೊಳ್ಳುವ ಅಗತ್ಯವಿಲ್ಲವೆಂದು ಧೈರ್ಯ ತುಂಬಿದರು. ನಂತರ ವಂಚಕರ ಸಂಖ್ಯೆಯನ್ನು ನಿರ್ಬಂಧಿಸಲು ಸೂಚಿಸಿ, ಸಂತ್ರಸ್ತನನ್ನು ಅವರ ನೆರೆಹೊರೆಯವರ ಮೂಲಕ ಸುರಕ್ಷಿತವಾಗಿ ಮನೆ ಸೇರುವಂತೆ ಮಾಡಿದ್ದಾರೆ.
ಸಂತ್ರಸ್ತ ಯಾವುದೇ ಹಣ ಕಳೆದುಕೊಳ್ಳದ ಕಾರಣ ಠಾಣೆಗೆ ದೂರು ನೀಡಿಲ್ಲ ಎಂದು ಕಾನ್‌ಸ್ಟೆಬಲ್ ತಿಳಿಸಿದ್ದಾರೆ.